Wednesday, December 2, 2015

Good Morning @ Hiremath, Tumkur


ಅಳಿಮನವ ಮಾಡಿ ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ 

ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ ನಾನು ಕೈ ಮುಟ್ಟಿ ಎತ್ತಿದೆನಾದರೆ 
ನಿಮ್ಮಾಣೆ, ನಿಮ್ಮ ಪ್ರಮಥರಾಣೆ.
ಅದೇನು ಕಾರಣವೆಂದರೆ, ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ.
ಇಂತಲ್ಲದೆ ನಾನು ಅಳಿಮನವ ಮಾಡಿ ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ 
ನೀನಾಗಲೆ ಎನ್ನ ನರಕದಲ್ಲಿ ಅದ್ದಿ ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ.

ಇದು ಶರಣೆ ಸತ್ಯಕ್ಕನ ವಚನ. “ಶಂಭುಜಕ್ಕೇಶ್ವರ” - ಇದು ಸತ್ಯಕ್ಕನ ವಚನಾಂಕಿತ.
ಸತ್ಯಕ್ಕ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಹಿರೇಜಂಬೂರು ಗ್ರಾಮದವಳು. ಇವಳು ಶಿವಭಕ್ತರ ಮನೆಯ ಅಂಗಳದಲ್ಲಿ ಕಸಗುಡಿಸುವ ಕಾಯಕವನ್ನು ಮಾಡಿಕೊಂಡಿದ್ದಳು. ಜಂಬೂರಿನ ‘ಜಕ್ಕೇಶ್ವರ’ ಇವಳ ಆರಾಧ್ಯದೈವ. ಅದಕ್ಕೋಸ್ಕರವೇ ಸತ್ಯಕ್ಕ ಜಕ್ಕೇಶ್ವರನನ್ನೇ ತನ್ನ ‘ವಚನಮುದ್ರೆ’ ಮತ್ತು ‘ವಚನಾಂಕಿತ’ವನ್ನಾಗಿಸಿಕೊಂಡಿದ್ದಾಳೆ.
ನಮಗೆಲ್ಲ ಗೊತ್ತಿರುವ ಹಾಗೆ, ನಮ್ಮ ಶರಣರು ಸ್ವಾಭಿಮಾನಿಗಳು. ಅವರು ವಿಮಲಚೇತನರು. ಸ್ವಾಭಿಮಾನವೇ ಅವರ ಆಸ್ತಿ. ಅದುವೇ ಅವರ ಅಸ್ತಿತ್ವ. ಮತ್ತದುವೇ ಅವರ ಸರ್ವಸ್ವ. ಇತ್ತೀಚಿನ ಜನಗಳ ಹಾಗೆ ಶರಣರು ‘ಒಪ್ಪಂದ’ (ಕಾಂಪ್ರೋಮೈಜ್) ಮಾದರಿಯ ಜನರಲ್ಲ. ಅವರದು, “ನೋ ಕಾಂಪ್ರೋಮೈಜ್” ಮತ್ತು “ಟೋಟಲ್ ಕಮ್ಮಿಟ್‌ಮೆಂಟ್” ಜಾಯಮಾನ. ಅವರಿಗೆ ಎಲ್ಲವೂ ಒಪ್ಪವಾಗಿರಬೇಕು. ಅವರು ಕಪ್ಪು, ತಪ್ಪುಗಳನ್ನು ಸಹಿಸಿಕೊಳ್ಳಲಾರರು. ಕಪ್ಪು, ತಪ್ಪುಗಳನ್ನು ಜೀರ್ಣಿಸಿಕೊಂಡು ಬದುಕುವುದು ಅವರಿಗೆ ಗೊತ್ತಿಲ್ಲ. ಸತ್ಯಕ್ಕ ಕೂಡ ಇದಕ್ಕೆ ಹೊರತಲ್ಲ. ಅವಳೂ ಕೂಡ ಹಾಗೇನೇ. 
ಅವಳು ಶರಣ ಪರಂಪರೆಯ ಪ್ರಾತಿನಿಧಿಕ ರೂಪ. ಅವಳ ನಡೆ-ನುಡಿಗಳಲ್ಲಿ ಸಾದೃಶ್ಯ ಇದೆ. ಅವಳ ಅಂತರಂಗ-ಬಹಿರಂಗಗಳಲ್ಲಿ ಪಾರದರ್ಶಕತೆ ಇದೆ. ಅವಳ ನಡೆ ಚಿನ್ನ, ಅವಳ ನುಡಿ ಚಿನ್ನ!!
ಸತ್ಯಕ್ಕ ತನ್ನ ಆರಾಧ್ಯದೈವ ಶ್ರೀ ಶಂಭುಜಕ್ಕೇಶ್ವರನಿಗೆ, “ನಾನೇನಾದರೂ ನನ್ನ ಮನಸ್ಸನ್ನು  ಕುಬ್ಜವಾಗಿಸಿಕೊಂಡು (ಅಳಿಮನ) ಪರರ ದುಡ್ಡು ಮತ್ತು ದ್ರವ್ಯಗಳಿಗೆ ಆಸೆಪಟ್ಟಿದ್ದೇನೆ ಎಂದಾದರೆ ನೀನು ಆ ಕೂಡಲೇ ನನ್ನನ್ನು ನರಕಕ್ಕೆ ತಳ್ಳಿಬಿಟ್ಟು ಅಲ್ಲಿಂದ ಮುಲಾಜಿಲ್ಲದೆ ಹಾಗೆಯೇ ಎದ್ದು ಹೋಗು” ಎಂದು ಹೇಳುತ್ತಾಳೆ.
ಸತ್ಯಕ್ಕನ ಈ ಧೈರ್ಯ ಮತ್ತು ಅವಳ ಸ್ವಾಭಿಮಾನಕ್ಕೆ ಕೋಟಿ ಕೋಟಿ ನಮನಗಳು.
ಬದುಕಿನುದ್ದಕ್ಕೂ ಪರಸತಿ, ಪರಧನ, ಪರದ್ರವ್ಯ, ಪರಸೊತ್ತುಗಳೊಂದಿಗೆ ಆಟ-ಚೆಲ್ಲಾಟವಾಡಿ ಕೊನೆಗಾಲದಲ್ಲಿ ದೇವರ ಎದುರಿನಲ್ಲಿ ‘ಕೈ’ಮುಗಿದು ನಿಂತುಕೊಂಡು, “ಅಪ್ಪಾ ದೇವರೇ, ನನ್ನನ್ನು ಕ್ಷಮಿಸು. ನಾನು ಮಾಡಿದ ತಪ್ಪುಗಳನ್ನೆಲ್ಲ ನಿನ್ನ ಹೊಟ್ಟೆಯೊಳಗೆ ಹಾಕಿಕೊಂಡು ನನಗೆ ಸದ್ಗತಿಯನ್ನು ಕರುಣಿಸು” ಎಂದು ಪರಿಪರಿಯಾಗಿ ಅಲವತ್ತುಕೊಳ್ಳುವ ಕಳ್ಳಭಕ್ತರೆಲ್ಲಿ? “ನಾನು ಮಾಡಿದ ತಪ್ಪಿಗೆ ನನ್ನನ್ನು ಚೆನ್ನಾಗಿ ಶಿಕ್ಷಿಸಿಬಿಟ್ಟು ನರಕದಲ್ಲಿ ನನ್ನನ್ನು ಅದ್ದಿ ನೀನೆದ್ದು ಹೋಗು” ಎಂದು ಹೇಳುವ ಮಹಾಸಾಧ್ವಿ ಸತ್ಯಕ್ಕ ಎಲ್ಲಿ? ಅಜಗಜಾಂತರ...! ಅಜಕ್ಕೂ ಗಜಕ್ಕೂ ಇರುವ ಅಂತರ...!!
ಈ ಸಂದರ್ಭದಲ್ಲಿ ಒಂದು ಮಾತನ್ನು ಎಲ್ಲರೂ ಗಮನಿಸಬೇಕು. ಪ್ರಾಮಾಣಿಕ ಭಕ್ತ ಯಾವ ದೇವರಿಗೂ ಕೂಡ ಹೆದರುವುದಿಲ್ಲ. ಕಳ್ಳಭಕ್ತ, ಬರೀ ದೇವರಿಗೆ ಮಾತ್ರವಲ್ಲ, ಎಲ್ಲರಿಗೂ ಹೆದರುತ್ತಾನೆ. ಆತನಲ್ಲಿರುವ ಅಪರಾಧೀ ಪ್ರಜ್ಞೆಯೇ 
ಆತ ಎಲ್ಲರಿಗೂ ಹೆದರುವಂತೆ ಮಾಡುತ್ತದೆ. ಅವರಿವರಿಗೇನು ಬಂತು? ಆತನಲ್ಲಿರುವ ‘ಪಾಪಪ್ರಜ್ಞೆ’ ಆತ ತನ್ನ ನೆರಳಿಗೂ ಕೂಡ ಹೆದರುವಂತೆ ಮಾಡುತ್ತದೆ.
ಸತ್ಯನಿಷ್ಠರಾದ ಪ್ರಾಮಾಣಿಕ ಭಕ್ತರು ದೇವರಿಗೆ ಹೆದರುವ ಪ್ರಮೇಯವೇ ಇಲ್ಲ. ಅವರು ಸಮಯ, ಸಂದರ್ಭಗಳು ಬಂದಾಗ ಆ ದೇವರಿಗೇನೇ ಗದರುತ್ತಾರೆ. ಅವರು ಆ ದೇವರಿಗೇನೇ “ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ ನಾಮದ ಬಲವೊಂದಿದ್ದರೆ ಸಾಕೋ” ಎಂದು ದಬಾಯಿಸುತ್ತಾರೆ. “ಬಿಟ್ಹಾಕು” ಎಂದು ದೇವರಿಗೇನೇ ಹೇಳುತ್ತಾರೆ. “ದೇವರನ್ನು ಅನ್ನುವುದು” ಮತ್ತು “ದೇವರನ್ನು ಗದರಿಕೊಳ್ಳುವುದು” ಎಂದರದು ಸಾಮಾನ್ಯದ ವಿಷಯವಲ್ಲ. ಅದಕ್ಕೆ ದೊಡ್ಡ ಧೈರ್ಯ ಬೇಕು. ದೇವರನ್ನು ಗದರಿಕೊಳ್ಳುವವರ “ನೈತಿಕ ಬೆನ್ನೆಲುಬು” ಗಟ್ಟಿಯಾಗಿರಬೇಕು. ಅವರು ಆಸೆಯನ್ನು ಗೆದ್ದಿರಬೇಕು. ಅವರು ಆಮಿಷದ ಮೇಲೆ ಹಿಡಿತವನ್ನು ಸಾಧಿಸಿರಬೇಕು. ಕಾಮ-ಕಾಮನೆಗಳನ್ನು ತಮ್ಮ ಮನದಾಳದಿಂದ ಗಾವುದ ಗಾವುದ ದೂರ ನಿಲ್ಲಿಸಿರಬೇಕು. 
ಪ್ರಸ್ತುತ ವಚನದಲ್ಲಿ ಸತ್ಯಕ್ಕ ಹೇಳುತ್ತಾಳೆ, “ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ ನಾನು ಕೈ ಮುಟ್ಟಿ ಎತ್ತಿದೆನಾದರೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ” ಎಂದು. ‘ಬಟ್ಟೆ’ ಎಂದರೆ ‘ದಾರಿ’ ಎಂದರ್ಥ. “ಹೇ ಶಂಭುಜಕ್ಕೇಶ್ವರ, ನಾನು ನಡೆದಾಡಿಕೊಂಡಿರುವ ದಾರಿಯಲ್ಲಿ ಅದೇನಾದರೂ ವಸ್ತ್ರ, ಒಡವೆ, ಚಿನ್ನ, ಬೆಳ್ಳಿ... ಇತ್ಯಾದಿ ಇನ್ನೇನಾದರೂ ಅಮೂಲ್ಯ ವಸ್ತುಗಳು ಬಿದ್ದಿದ್ದರೆ ಅದನ್ನು ನೋಡಿ ನಾನು ವಿಚಲಿತಳಾಗುತ್ತೇನೆ, ಕಂಪನಕ್ಕೆ ಒಳಗಾಗುತ್ತೇನೆ ಎಂದು ನೀನಂದುಕೊಂಡಿದ್ದರೆ ಖಂಡಿತವಾಗಿಯೂ ಅದು ತಪ್ಪು. ನಾನು ನಿನ್ನ ಮೇಲೆ ಆಣೆ ಇಟ್ಟು ಹೇಳುತ್ತೇನೆ. ಅಷ್ಟು ಮಾತ್ರವಲ್ಲ, ನಿನ್ನ ಮನದಾಳದಲ್ಲಿ ಮನೆಮಾಡಿಕೊಂಡಿರುವ ಶರಣರ ಮೇಲೆ, ನಿನ್ನ ಅಕ್ಕಪಕ್ಕ ಮತ್ತು ಸುತ್ತಮುತ್ತ ಇರುವ ಪ್ರಮಥರ ಮೇಲೆ ಆಣೆ ಮಾಡಿ ಹೇಳುತ್ತೇನೆ. ಪರದ್ರವ್ಯ, ಪರವಸ್ತು ಮತ್ತು ಪರಧನವನ್ನು ಕಂಡು ನಾನು ‘ಯತ್ಕಿಂಚಿತ್ತೂ’ ಮನಸ್ಸನ್ನು ಕೆಡಿಸಿಕೊಳ್ಳುವುದಿಲ್ಲ. ಪರದ್ರವ್ಯ, ಪರವಸ್ತುಗಳನ್ನು ಕಂಡು ನಾನೇಕೆ ಮನಸ್ಸು ಕೆಡಿಸಿಕೊಳ್ಳಬೇಕು. ನೀನೇ ಹೇಳು. ನನಗೆ ನೀನು ಕೊಟ್ಟಿರುವುದೇ ಸಾಕು. 
ನೀನು ನೀಡಿದ ಭಿಕ್ಷೆಯಲ್ಲಿ ನಾನು ಸಂತೃಪ್ತಳಾಗಿದ್ದೇನೆ. ನೀನು ಕೊಟ್ಟ ಭಿಕ್ಷೆ ನನ್ನ ‘ಕೈ’ ತುಂಬ ಇರುವಾಗ ಇನ್ನೊಬ್ಬರ ಎದುರಿನಲ್ಲಿ ನಾನೇಕೆ ಕೈಯೊಡ್ಡಲಿ? ನಿನ್ನನ್ನು ಬೇಡಿದ ‘ಕೈ’ ಇನ್ನಾರನ್ನೂ ಬೇಡದು. ನಿನ್ನ ಎದುರಲ್ಲಿ ಬಾಗಿದ ‘ತಲೆ’ ಇದು, ಇನ್ನಾರ ಎದುರಲ್ಲೂ ಬಾಗದು. ನನ್ನ ಬಗ್ಗೆ ನನಗೆ ಭರವಸೆ ಇದೆ. ನನ್ನ ಮನಸ್ಸಿನ ಕಾಮ-ಕಾಮನೆಗಳ ಮೇಲೆ ನನಗೆ ನಿಯಂತ್ರಣವಿದೆ. ಅಳಿಮನಸ್ಸಿನ ಮಾತು ಕೇಳಿ (‘ಅಳಿಯಾಸೆ’ ಅಲ್ಪ ಆಸೆಯ ಹಾಗೆ ಅಳಿಮನವೆಂದರೆ ‘ಕುಬ್ಜ ಮನಸ್ಸು’ ಎಂದರ್ಥ) ನನ್ನ ಇರುವಿಕೆಯಲ್ಲಿ ‘ಹುಳಿ’ ಹಿಂಡಿಕೊಳ್ಳಲಾರೆ. ನನ್ನ ನಿಸ್ಪೃಹ ವ್ಯಕ್ತಿತ್ವಕ್ಕೆ ನಾನು ಧಕ್ಕೆ ತಂದುಕೊಳ್ಳಲಾರೆ. ಅಕಸ್ಮಾತ್ ನಾನು ಹಾಗೇನಾದರೂ ‘ಎಡವಟ್ಟು’ ಮಾಡಿಕೊಂಡರೆ ನೀನು ಮುಲಾಜಿಲ್ಲದೆ ನನಗೆ ಶಿಕ್ಷೆ ಕೊಡು. ನನಗೆ ‘ಭಿಕ್ಷೆ’ ನೀಡುವ ಕೈಗಳು ನನ್ನನ್ನು ಶಿಕ್ಷಿಸಿದರೆ ಅದನ್ನು ನಾನು ಅನುಗ್ರಹವೆಂದು ಮತ್ತು ಪ್ರಸಾದವೆಂದು ಭಾವಿಸುತ್ತೇನೆ” ಎಂದು.
“ಪರಧನ, ಪರದ್ರವ್ಯ, ಪರಸೊತ್ತು ಬಟ್ಟೆಯಲ್ಲಿ (ದಾರಿ) ಬಿದ್ದರೂ ಅದು ನಮಗೆ ಬೇಡ” ಎಂದು ಹೇಳುವ ಸತ್ಯಕ್ಕನಂಥ ಶರಣ-ಶರಣೆಯರು ಎಲ್ಲಿ? ಪರಧನ, ಪರದ್ರವ್ಯ, ಪರಸೊತ್ತು ಹೊಟ್ಟೆಯಲ್ಲಿದ್ದರೂ ಮತ್ತು ದಿನನಿತ್ಯದಲ್ಲಿ ಅವುಗಳಿಂದಲೇ ‘ಹೊಟ್ಟೆ’ ತುಂಬಿಸಿಕೊಳ್ಳುತ್ತಲಿದ್ದರೂ ಹೇಸಿಕೊಳ್ಳದ ಜನಗಳೆಲ್ಲಿ? ಶರಣ ಸಂಸ್ಕೃತಿಯ ಹರಿಕಾರರು “ಮತ್ತೊಬ್ಬರ ದುಡ್ಡು, ದೌಲತ್ತು ನಮಗೇಕೆ?” ಎಂದಂದುಕೊಂಡು ಬದುಕುತ್ತಾರೆ. “ಮತ್ತೊಬ್ಬರ ದುಡ್ಡು, ದೌಲತ್ತಿಲ್ಲದೆ ಅದು ಹೇಗೆ ಬದುಕುವುದು?” ಎಂದು ಕೇಳಿಕೊಂಡಿರುತ್ತಾರೆ ಹರಣ-ಅಪಹರಣ ಸಂಸ್ಕೃತಿಯ ಹರಕೆದಾರರು!!
ಮೊದಲೊಂದು ಕಾಲಘಟ್ಟವಿತ್ತು. ಆ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಮಾತ್ರ “ನಿನ್ನ ಪರ್ಸೆಂಟೇಜ್ ಎಷ್ಟು?” ಎಂದು ಕೇಳಲಾಗುತ್ತಿತ್ತು. ಈಗ ‘ಪರ್ಸೆಂಟೇಜ್’ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿ ಉಳಿಯದೆ ಅದು “ಅಲ್ಲಿ ಇಲ್ಲಿ” ಎನ್ನದೆ
‘ಬಹುತೇಕ’ ಮತ್ತು ‘ಬಹುತರ’ ಎಲ್ಲ ಕ್ಷೇತ್ರಗಳನ್ನೂ ಆಮೂಲಾಗ್ರವಾಗಿ ಆವರಿಸಿಕೊಂಡುಬಿಟ್ಟಿದೆ. ನಮ್ಮ ಅಕ್ಕಪಕ್ಕ ಸುತ್ತಮುತ್ತ ಇರುವ ಅಧಿಕಾರಿ, ರಾಜಕಾರಣಿ, ಪುಢಾರಿಗಳನ್ನು ಮೊದಲುಮಾಡಿಕೊಂಡು ಈಗ ಎಲ್ಲರೂ 
“ನಮ್ಮ ಪರ್ಸೆಂಟೇಜ್ ಎಷ್ಟು? ನಿಮ್ಮ ಪರ್ಸೆಂಟೇಜ್ ಎಷ್ಟು?” ಎಂದು ಕೇಳುತ್ತ ಪರಮಾತ್ಮನ ಜಪ ಮಾಡುವುದನ್ನು ಬಿಟ್ಟು “ಪರ್ಸೆಂಟೇಜ್ ಜಪ” ಮಾಡಿಕೊಂಡಿದ್ದಾರೆ. ಇಂಧ “ಪರ್ಸೆಂಟೇಜ್‌ಪ್ರಿಯ”, “ಪರ್ಸೆಂಟೇಜ್‌ಭೂಷಣ”, “ಪರ್ಸೆಂಟೇಜ್‌ರತ್ನ” ಜನಗಳು ಸತ್ಯಕ್ಕನ ಈ ವಚನದಿಂದ ಪಾಠ ಕಲಿತುಕೊಳ್ಳಬೇಕು.
ಅವರಿವರ ಮತ್ತು ಶಿವಭಕ್ತರ ಮನೆಯ ಅಂಗಳದ ಕಸಗುಡಿಸಿಕೊಂಡಿದ್ದ ಹೆಣ್ಣುಮಗಳೊಬ್ಬಳು ಇಷ್ಟೊಂದು ಧೈರ್ಯದಿಂದ “ತನಗಿನ್ನೊಬ್ಬರದು ಬೇಡ, ತನಗಿನ್ನೊಬ್ಬರ ಎಂಜಲು ಬೇಡ” ಎಂದು ಹೇಳಬೇಕೆಂದರೆ ಅವಳಲ್ಲಿ ಅದೆಂಥ ದಕ್ಷ ‘ನಿಸ್ಪೃಹತೆ’ 
ಮತ್ತು ಅದೆಂಥ ‘ಗಟ್ಟಿಗತನ’ ಇರಬೇಕು ಎಂಬುವುದನ್ನು ನಾವು-ನೀವುಗಳು ಊಹಿಸಿ ತಿಳಿಯಬೇಕಷ್ಟೇ!! ಹಾಗೇನಾದರೂ ಒಂದು ವೇಳೆ ಅಪ್ಪಿತಪ್ಪಿ ತಾನು ಆಸೆಪಟ್ಟದ್ದೇ ಆದರೆ ತನ್ನನ್ನು ಮುಲಾಜಿಲ್ಲದೆ ಮತ್ತು ತನ್ನ ಮುಖ ನೋಡದೆ ನರಕದಲ್ಲಿ ಅದ್ದುವಂಥ ಘೋರಶಿಕ್ಷೆಗೆ ಗುರಿಪಡಿಸು” ಎಂದು ಆ ದೇವರಲ್ಲಿ ಕೇಳಿಕೊಳ್ಳುವಂಥ ಸತ್ಯಕ್ಕನ ಆ ನೀತಿ-ನಿಯತ್ತುಗಳಿಗೆ
ಮತ್ತು ಆ ದಿಟ್ಟ-ಧೀಮಂತ ನಿಲುವಿಗೆ ಆ ದೇವರು ಕೂಡ ಬೆರಗಾಗುತ್ತೇನೆ. ಅಷ್ಟು
ಮಾತ್ರವಲ್ಲ, ಆತ ತನ್ನ ಬಿಟ್ಟಕಣ್ಣುಗಳನ್ನು ಹಾಗೆಯೇ ಬಿಟ್ಟುಕೊಂಡು ಅನಿಮಿಷನೇತ್ರದಿಂದ ಅವಳನ್ನೇ ನೋಡುತ್ತ ನಿಂತುಕೊಳ್ಳುತ್ತಾನೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು
    

No comments:

Post a Comment