ಹದವರಿತು ಕುಟ್ಟಿದರೆ ಅಕ್ಕಿ..!!
ಹದ ತಪ್ಪಿ ಕುಟ್ಟಿದರೆ ನುಚ್ಚಕ್ಕಿ...!!!
ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ,
ವ್ರತಹೀನನ ನೆರೆಯೆ ನರಕವಲ್ಲದೆ ಮುಕ್ತಿಯಿಲ್ಲ.
ಅರಿಯದುದು ಹೋಗಲಿ, ಅರಿದು ಬೆರೆದೆನಾದಡೆ,
ಕಾದ ಕತ್ತಿಯಲ್ಲಿ ಕಿವಿಯ ಕೊಯ್ವರಯ್ಯ.
ಒಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ.
ಇದು ಕೊಟ್ಟಣದ ಸೋಮಮ್ಮನ ವಚನ. “ನಿರ್ಲಜ್ಜೇಶ್ವರ” - ಇದು ಸೋಮಮ್ಮನ ವಚನಾಂಕಿತ.
ಸೋಮಮ್ಮ ‘ಕೊಟ್ಟಣ’ ಕಾಯಕವನ್ನು ಅಂದರೆ ‘ಕುಟ್ಟುವ’ ಕಾಯಕವನ್ನು ಮಾಡಿಕೊಂಡಿದ್ದಳು.“ಕೊಟ್ಟಣ” ಎಂದರೆ “ಕುಟ್ಟುವುದು” ಎಂದರ್ಥ. ಸೋಮಮ್ಮ ತನ್ನ ಉಪಜೀವನಕ್ಕಾಗಿ
ಶಿವಭಕ್ತರ ಮನೆಯಲ್ಲಿ ಬತ್ತ, ನೆಲ್ಲು, ಗೋದಿ ಇತ್ಯಾದಿಗಳನ್ನು ಕುಟ್ಟುವ ಕಾಯಕವನ್ನು ಮಾಡಿಕೊಂಡಿದ್ದಳು.
ಸೋಮಮ್ಮ ಅಕ್ಷರಶಃ ‘ಶ್ರಮಜೀವಿ’ ಮತ್ತು ‘ಕಾಯಕಪ್ರಿಯೆ’!!
ಪ್ರಸ್ತುತ ವಚನದಲ್ಲಿ, “ಯಾವುದೇ ಕಾಯಕವನ್ನು ಮಾಡಿದರೂ ಸರಿ,
ಅದನ್ನು ಮನಮುಟ್ಟಿ ಪ್ರಾಮಾಣಿಕವಾಗಿ ಮಾಡಬೇಕು” ಎಂಬ ಸಂದೇಶವನ್ನು
ಸೋಮಮ್ಮ ನೀಡಿದ್ದಾಳೆ.
ಈ ಸಂದೇಶವನ್ನು ನಮಗೆ ತಲುಪಿಸುವುದಕ್ಕಾಗಿ
ಅವಳು ತಾನು ಮಾಡುವ ಕಾಯಕವನ್ನೇ ಉದಾಹರಿಸಿ ನಮಗೆಲ್ಲ ತಿಳಿಹೇಳಿದ್ದಾಳೆ.
ಬತ್ತವನ್ನು ಕುಟ್ಟುವಾಗ ‘ಹದ’ ಇರಬೇಕು.
‘ಹದ’ ಎಂದರೆ ಕೌಶಲ, ಚಾಕುಚಕ್ಯತೆ, ಜಾಗರೂಕತೆ ಎಂದರ್ಥ.
ಬತ್ತದಿಂದ ಅಕ್ಕಿಯನ್ನು ಪಡೆಯಬಯಸುವವರು ಬತ್ತವನ್ನು ಕುಟ್ಟುವಾಗ
‘ಹದ’ ತಪ್ಪದ ಹಾಗೆ ನೋಡಿಕೊಳ್ಳಬೇಕು. ಬತ್ತವನ್ನು ಕುಟ್ಟುವಾಗ
‘ಹದ’ ತಪ್ಪಿ, ಮೈಯಲ್ಲಿ ಆವೇಶ ಬಂದವರ ಹಾಗೆ ಬತ್ತವನ್ನು ಕುಟ್ಟಿದರೆ
ನಮಗೆ ಅಕ್ಕಿ ದೊರಕುವುದಿಲ್ಲ. ಅಕ್ಕಿಯ ‘ಮೃತರೂಪ’ ನುಚ್ಚಕ್ಕಿ ದೊರಕುತ್ತದೆ.
“ಹದವರಿತು ಕುಟ್ಟಿದರೆ ಅಕ್ಕಿ; ಹದ ತಪ್ಪಿ ಕುಟ್ಟಿದರೆ ನುಚ್ಚಕ್ಕಿ!!”
ನಮ್ಮ ದೃಷ್ಟಿಯಲ್ಲಿ ಅಕ್ಕಿಯ ಮೃತರೂಪವೆಂದರೆ ‘ನುಚ್ಚಕ್ಕಿ’.
ಅಕ್ಕಿಯದು ನುಚ್ಚಕ್ಕಿಯಾದರೆ ಅದನ್ನು ಬೇಯಿಸಿಕೊಂಡು ಒಪ್ಪ-ಓರಣವಾಗಿ
ಅನ್ನವನ್ನು ಮಾಡಿಕೊಂಡು ಉಣ್ಣಲಿಕ್ಕಾಗುವುದಿಲ್ಲ.
ಆದ್ದರಿಂದ ಬತ್ತವನ್ನು ಕುಟ್ಟುವಾಗ ಹದವರಿತು ಒನಕೆಯಿಂದ ಪೆಟ್ಟುಗಳನ್ನು ಹಾಕಬೇಕು.
ಒನಕೆಯನ್ನು ಕೈಯಲ್ಲಿ ಹಿಡಿದುಕೊಂಡು ಒನಕೆಯ ಓಬವ್ವನ ಹಾಗೆ
ವೀರಾವೇಶದಿಂದ ಬತ್ತವನ್ನು ಕುಟ್ಟತೊಡಗಿದರೆ ಅಂತ್ಯದಲ್ಲಿ ನಮಗೆಲ್ಲ ನುಚ್ಚಕ್ಕಿಯೇ ಗತಿ.
ಒನಕೆ ಓಬವ್ವ ಒನಕೆಯಿಂದ ವೈರಿಸೈನಿಕರ ತಲೆಕುಟ್ಟಿ “ವೀರ ಒನಕೆ ಓಬವ್ವ” ಎಂಬ ಕೀರ್ತಿಯನ್ನು ಪಡೆದಳು.
ವೈರಿಗಳ ತಲೆಕುಟ್ಟುವಾಗ ಓಬವ್ವ ಹಾಗೆ ಮಾಡಿದ್ದು ಸರಿ.
ಅದೇ ರೀತಿಯ ವೀರಾವೇಶವನ್ನು ಬತ್ತ, ನೆಲ್ಲುಗಳ ಮೇಲೆ ತೋರಿಸಿದರೆ ಏನು ಪ್ರಯೋಜನ?
ಆಗ ಅಕ್ಕಿಯ ಅವತಾರಕ್ಕೆ ‘ಇತಿಶ್ರೀ’ ಹೇಳಿಬಿಟ್ಟು
ನುಚ್ಚಕ್ಕಿಯ ಅವತಾರಕ್ಕೆ ‘ಅಥಶ್ರೀ’ ಹೇಳಿಕೊಂಡಿರಬೇಕಾಗುತ್ತದೆ.
ವೀರಾವೇಶದಿಂದ ಬತ್ತವನ್ನು ಕುಟ್ಟುವಾಗ
ಅಕಸ್ಮಾತ್ ಒನಕೆಯ ಏಟು ಅಪ್ಪಿತಪ್ಪಿ ಕೈಗೆ ಬಿದ್ದರೆ ಕೈಯದು ಅಪ್ಪಚ್ಚಿಯಾಗಿ ಹೋಗುತ್ತದೆ.
ಬತ್ತದ ಜೊತೆಯಲ್ಲಿ ಕೈಯನ್ನು ಕೂಡ ಕುಟ್ಟಿಕೊಂಡಂತಾಗುತ್ತದೆ.
ಆದ್ದರಿಂದ ಯಾರಾದರೂ ಸರಿ, ಬತ್ತ, ಗೋದಿ, ನೆಲ್ಲು..., ಇತ್ಯಾದಿ ದ್ವಿದಳ ಧಾನ್ಯಗಳನ್ನು ಕುಟ್ಟುವಾಗ ನಿಗಾವಹಿಸಬೇಕು.
ನಮ್ಮ ಬದುಕಲ್ಲಿ ಮತ್ತು ಬಾಳಲ್ಲಿ ನಮಗೆ ಉತ್ತಮ ಸ್ನೇಹಿತರು ಬೇಕು.
ಜೊತೆಯಲ್ಲಿ ಉತ್ತಮ ಸ್ನೇಹಿತರಿದ್ದರೆ ನಮ್ಮ ಬದುಕು ಚಮಕಾಯಿಸಿಕೊಂಡಿರುತ್ತದೆ.
ಖಂಡಿತವಾಗಿಯೂ ಹೇಳುತ್ತೇವೆ, ಬದುಕದು ಚಿಂದಿಯಾಗುವುದಿಲ್ಲ.
ಆದ್ದರಿಂದ ನಾವುಗಳು ನಮ್ಮ ಬದುಕಲ್ಲಿ ಉತ್ತಮರ ಜೊತೆ ಮಾತ್ರ ಸ್ನೇಹದಿಂದಿರಬೇಕು.
ಉತ್ತಮ ಸ್ನೇಹಿತರು ಸ್ವರ್ಗದ ದಾರಿ ತೋರಿಸುತ್ತಾರೆ.
ಉತ್ತಮರಲ್ಲದ ಸ್ನೇಹಿತರು ನರಕದ ಹೆದ್ದಾರಿಯಾಗಿ ನಿಂತುಕೊಳ್ಳುತ್ತಾರೆ.
ಉತ್ತಮರಲ್ಲದ ಜನಗಳ ಜೊತೆ ಸ್ನೇಹ, ಸರಸ, ಸಲ್ಲಾಪ, ಒಡನಾಟವಿಟ್ಟುಕೊಂಡರೆ ನರಕ ತಪ್ಪದು.
ಆದ್ದರಿಂದ ಆ ವಿಷಯದಲ್ಲಿ ಹುಷಾರು!!
ಪ್ರಸ್ತುತ ವಚನದಲ್ಲಿ ಸೋಮಮ್ಮ ಉತ್ತಮರಲ್ಲದವರನ್ನು ‘ವ್ರತಹೀನರು’ ಎಂದು ಕರೆದಿದ್ದಾಳೆ.
“ವ್ರತಹೀನರು” ಎಂದರೆ “ನೀತಿಸಂಹಿತೆಯನ್ನು ಉಲ್ಲಂಘಿಸಿದವರು” ಎಂದರ್ಥ.
ಅವರ ಜೊತೆ ಬೆರೆತರೆ (ನೆರೆಯೆ), ಮತ್ತವರ ಜೊತೆ ಕೂಡಿಕೊಂಡಿದ್ದರೆ ನುಚ್ಚಕ್ಕಿಯಾದಂತೆ.
ಅವರ ಜೊತೆ ಒಡನಾಟ-ವ್ಯವಹಾರ, ಸರಸ-ಸಲ್ಲಾಪವಿಟ್ಟುಕೊಂಡರೆ ನರಕವೇ ಗತಿ.
ಆದ್ದರಿಂದ ವ್ರತಹೀನರ ಜೊತೆ ‘ಸ್ನೇಹ’ ಮಾಡುವಾಗ ಹುಷಾರಾಗಿರಬೇಕು.
ಆಕಸ್ಮಿಕವಾಗಿ ವ್ರತಹೀನರ ಜೊತೆ ಸ್ನೇಹ ಮಾಡಬೇಕಾದ ಪ್ರಸಂಗ ಬಂದರೆ
ಅವರುಗಳ ವಿಷಯದಲ್ಲಿ ಹೆಚ್ಚು ಹೆಚ್ಚು ಜಾಗರೂಕರಾಗಿರಬೇಕು.
ಉತ್ತಮ ಸ್ನೇಹಿತರು ‘ಜನ್ನತ್’ ಆದರೆ ಕೆಟ್ಟಸ್ನೇಹಿತರು ‘ಜಹನ್ನುಮ್’ ಇದ್ದ ಹಾಗೆ.
ಹಿಂದೀ ಭಾಷೆಯಲ್ಲಿ ಒಂದು ‘ಕಹಾವತ್’ (ಗಾದೆಮಾತು) ಇದೆ,
“ಸೌ ಸೋನಾರ್ ಕಾ, ಏಕ್ ಲೋಹಾರ್ ಕಾ” ಎಂದು.
ಆದ್ದರಿಂದ ಉತ್ತಮರಲ್ಲದವರ ಜೊತೆಗಿನ ಸ್ನೇಹಕ್ಕಿಂತ ಸ್ನೇಹಿತರಿಲ್ಲದ ಹಾಗೆ ಇರುವುದೇ ಅದೆಷ್ಟೋ ವಾಸಿ.
ಸ್ನೇಹಿತರ ಆಯ್ಕೆಯ ವಿಷಯದಲ್ಲಿ ಯಾವುದೇ ಕಾರಣಕ್ಕೂ ‘ಅನವಧಾನ’ ಕೂಡದು ಮತ್ತು ಲೋಪವೆಸಗಲಾಗದು. ಅದೊಂದು ವೇಳೆ ನಮಗೆ ನಮ್ಮ ಸ್ನೇಹಿತರುಗಳು ‘ಸಮಾನವಯಸ್ಕರಲ್ಲ’ ಎಂದೆನಿಸಿದರೂ ಪರವಾ ಇಲ್ಲ;
ಅವರು ‘ಸಮಾನಮನಸ್ಕರ’ರಾಗಿದ್ದರೆ ಸಾಕು.
ಪ್ರಸ್ತುತ ವಚನದಲ್ಲಿ ಮತ್ತೆ ಮುಂದುವರಿದು ಸೋಮಮ್ಮ ಹೇಳುತ್ತಾಳೆ,
“ಏನೋ ಗೊತ್ತಿಲ್ಲದೆ ಯಾವಾಗಲೋ ಒಂದು ತಪ್ಪಾಯಿತು ಎಂದಿಟ್ಟುಕೊಳ್ಳುವಾ.
ಅದು ‘ಓಕೆ’ ಮತ್ತು ಅದು ‘ಕ್ಷಮ್ಯ’ ಕೂಡ ಅಹುದು.
ಆದರೆ ಎಲ್ಲವೂ ಗೊತ್ತಿದ್ದು ಹಳ್ಳಕ್ಕೆ ಬಿದ್ದರೆ ಅದು ಖಂಡಿತವಾಗಿಯೂ ತಪ್ಪು.
ಅದನ್ನು ಕ್ಷಮಿಸಲಾಗದು. ಅದು ‘ಅಕ್ಷಮ್ಯ’. ಅರಿಯದೆ ಬೆರೆತರೆ ಅದನ್ನು ‘ಮಾಫ್’ ಮಾಡಬಹುದು.
ಆದರೆ ಅರಿತೂ ಕೂಡ ಬೆರೆತರೆ ಮತ್ತು ತಿಳಿದೂ ತಿಳಿದೂ ತಪ್ಪುಮಾಡಿದರೆ ಅದನ್ನು ‘ಮಾಫ್’ ಮಾಡಲಾಗದು.
ಅದಕ್ಕೆ ಶಿಕ್ಷೆಯಾಗಲೇಬೇಕು.
ಸೋಮಮ್ಮ ಹೇಳುತ್ತಾಳೆ, “ನಾವೇನಾದರೂ ಎಲ್ಲವನ್ನೂ ಅರಿತೂ ಕೂಡ ತಪ್ಪುಮಾಡಿದರೆ
ಬಲ್ಲವರು ನಮ್ಮನ್ನು ಶಿಕ್ಷೆಗೊಳಗುಮಾಡಿ ಕಾಯ್ದ ಕತ್ತಿಯಲ್ಲಿ ಕಿವಿಗಳನ್ನು ಕೊಯ್ಯುವರು” ಎಂದು.
ಅದಕ್ಕೋಸ್ಕರ ಸೋಮಮ್ಮ ತನ್ನ ಇಷ್ಟದೈವ ನಿರ್ಲಜ್ಜೇಶ್ವರನಿಗೆ ಹೇಳುತ್ತಾಳೆ,
“ನಾನು ಒಲ್ಲೆ, ಬಲ್ಲೆನಾಗಿ!!”, “ನಾನು ಬಲ್ಲೆನಾಗಿ, ಒಲ್ಲೆ.
ನಿಮ್ಮ ಮೇಲೆ ನಾನು ಆಣೆಮಾಡಿ ಹೇಳುತ್ತೇನೆ. ಅರಿತೂ ಕೂಡ ತಪ್ಪುಮಾಡಿದರೆ
ಅದಕ್ಕೆ ಸಿಕ್ಕುವ ಶಿಕ್ಷೆಯ ಪರಿಚಯ ನನಗಿದೆ.
ಅದಕ್ಕೋಸ್ಕರ ನಾನು ನನ್ನ ಬಾಳಲ್ಲಿ ಹದತಪ್ಪಿ ಬಾಳಲಾರೆ ಮತ್ತು ಹಾಗೆ ನಡೆದುಕೊಳ್ಳಲಾರೆ.
ಅಷ್ಟು ಮಾತ್ರವಲ್ಲ, ವ್ರತಹೀನರ ಜೊತೆಗಿನ ಸ್ನೇಹ, ಸರಸಗಳಿಂದ ನಾನು ದೂರದಲ್ಲಿದ್ದು
ಅವರಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವೆ” ಎಂದು.
ಈ ಸಂದರ್ಭದಲ್ಲಿ ನಾವುಗಳು ಒಂದು ವಿಷಯವನ್ನು ಗಮನಿಸಬೇಕು.
ನಮ್ಮ ಶರಣರು ನಿಜಕ್ಕೂ ಸ್ವಾಭಿಮಾನಿಗಳು.
ಅವರಿಗೆ ಹಸಿ, ಕಸಿ, ಮಸಿಗಳೊಂದಿಗಿನ ಒಪ್ಪಂದದ ಬದುಕು ಇಷ್ಟವಿಲ್ಲ.
ಅವರಿಗೆ ಕಸಿವಿಸಿಯ ‘ಹಸಿ’ ಬದುಕು ಇಷ್ಟವಿಲ್ಲ. ಅವರಿಗೆ ಸಮಝಾಯಿಸಿಯ ‘ಸುಳ್ಳುಬದುಕು’ ಬೇಕಿಲ್ಲ.
ಅವರೇನಾದರೂ ಸರಿ, ನೇರ, ದಿಟ್ಟ ಮತ್ತು ನಿರಂತರ!!
ಪ್ರಸಂಗ ಬಂದರೆ ಅವರು ಆ ತಮ್ಮ ಆರಾಧ್ಯ ದೇವರನ್ನೇ ತರಾಟೆಗೆ ತೆಗೆದುಕೊಳ್ಳುತ್ತಿದ್ದರು.
ಅವರು ಶಿಕ್ಷೆಗೆ ಹೆದರುತ್ತಿರಲಿಲ್ಲ.
ಆದರವರು ಅನ್ಯಾಯ, ಅತ್ಯಾಚಾರ, ಅಕ್ರಮ ಮತ್ತು ಮಿಥ್ಯಾಚಾರಗಳಿಗೆ ಹೆದರುತ್ತಿದ್ದರು.
ಅವರುಗಳು ಈ ಅಕ್ರಮ-ವಿಕ್ರಮಗಳ ಸಮ-ಸಮುಚ್ಚಯವನ್ನು
ತಮ್ಮ ಅಕ್ಕಪಕ್ಕ ಕೂಡು ಬಿಟ್ಟುಕೊಳ್ಳಲು ಇಷ್ಟಪಡುತ್ತಿರಲಿಲ್ಲ.
ತಾವು ತಪ್ಪು ಮಾಡಿದರೆ ಶಿಕ್ಷೆ ಕೊಡು ಎಂದು ಶರಣರು ನೇರವಾಗಿ ದೇವರನ್ನೇ ಕೇಳುತ್ತಿದ್ದರು.
ಅವರು ತಪ್ಪುಮಾಡಿ ಇವತ್ತಿನ ನಮ್ಮ ಲೋಕಾಯುಕ್ತರುಗಳ ಹಾಗೆ ಬಚಾವಾಗಲು ಪ್ರಯತ್ನಿಸುತ್ತಿರಲಿಲ್ಲ.
ಸರಕಾರದ ವಿವಿಧ ಇಲಾಖೆಗಳ ಮುಖದ ಮೇಲಿನ ಮಸಿಯನ್ನು ತೊಳೆಯಲು ಹುಟ್ಟಿಕೊಂಡ
ಲೋಕಾಯುಕ್ತ ಇಲಾಖೆಯೇ ತನ್ನ ಮುಖಕ್ಕೆ ಮಸಿಬಳಿದುಕೊಂಡು ಕುಳಿತುಕೊಂಡಿರುವುದು
ಇವತ್ತಿನ ಬಹುದೊಡ್ಡ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಣಕವೆಂದು ಹೇಳಬಹುದು.
‘ಆಯುಕ್ತ’ ಪದವಿಭೂಷಿತ ಲೋಕಾಯುಕ್ತರೇ ಅಯುಕ್ತರೆಂದು ಸಾಬೀತಾದ ಮೇಲೆ
ಇನ್ನಾರಿಗೆ ತಾನೆ ದೂರುವುದು?
ನಮ್ಮ ಶರಣರು ಕಾಯಕತಪಸ್ವಿಗಳು. ಅವರು ಕಾಯಕಾನುಷ್ಠಾನಮೂರ್ತಿಗಳು.
ಅವರಿಗೆ ‘ದಂಡಪಿಂಡ’ ಜನಗಳನ್ನು ಕಂಡರೆ ಎಲ್ಲಿಲ್ಲದ ಮತ್ತು ಎಲ್ಲೆ ಇಲ್ಲದ ‘ಅಲರ್ಜಿ’!!
ನಮ್ಮ ಶರಣರು ‘ಬಣ್ಣ’ ಬದಲಾಯಿಸುವ ಮತ್ತು ‘ಬಣ’ ಬದಲಾಯಿಸುವ ಜನಗಳನ್ನು ಕಂಡರೆ
ಗಾವುದ ಗಾವುದ ದೂರ ನಿಂತುಕೊಳ್ಳುತ್ತಿದ್ದರು. ಶರಣರು ದುಡ್ಡಿದ್ದವರಿಗೆ ‘ಸಲಾಮು’ ಹೊಡೆಯುತ್ತರಲಿಲ್ಲ.
ಅವರಿಗೆ ಅವರ ದುಡಿಮೆಯೇ ದೇವರಾಗಿತ್ತು. ನಮ್ಮಗಳ ಮಧ್ಯದಲ್ಲಿ ಈ ಕಾಲದಲ್ಲಿ ಕೆಲವು ಜನಗಳಿದ್ದಾರೆ,
ಅವರಿಗೆ ಅವರ ಸ್ವಂತ ದುಡಿಮೆ ಅಲ್ಲ, ಅವರಿಗೆ ಇನ್ನೊಬ್ಬರ, ಮತ್ತೊಬ್ಬರ ದುಡಿಮೆಯೇ ದೇವರಾಗಿರುತ್ತದೆ.
ಕೊಟ್ಟಣದ ಸೋಮಮ್ಮ ಅನಕ್ಷರಸ್ಥೆಯಾದರೂ ಅವಳ ಮನದಾಳದಿಂದ ಹೊರಬಂದ
ಈ ವಚನವು ಸಮಾಜಕ್ಕೆ ಮಾರ್ಗದರ್ಶಿಯಾಗಿದೆ ಮತ್ತು ಜನಗಳ
ಬಾಳಯಾತ್ರೆಯಲ್ಲಿ ಅವರ ಸುಖಪ್ರಯಾಣಕ್ಕೆ ದಾರಿತೋರಿಸುವ ದಾರಿದೀಪವಾಗಿದೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು


No comments:
Post a Comment