Wednesday, November 18, 2015

ವಚನಾಂತರಂಗ - Vachanantaranga

1. ವಚನಾಂತರಂಗ

ಗಂಗಾ ನದಿಯಲ್ಲಿ ಮಿಂದು ಗಂಜಳದಲ್ಲಿ ಹೊರಳುವರೆ?

ಚಂದನವಿದ್ದಂತೆ ದುರ್ಗಂಧವ ಮೈಯಲ್ಲಿ ಪೂಸುವರೆ?

ಸುರಭಿ ಮನೆಯಲ್ಲಿ ಕರೆವುತ್ತಿರೆ, ಹರಿವರೆ ಸೊಣಗನ ಹಾಲಿಂಗೆ?

ಬಯಸಿದಮೃತವಿದ್ದಂತೆ, ಅಂಬಿಲವ ನೆರೆದುಂಬ ಭ್ರಮಿತ ಮಾನವಾ, ನೀನು ಕೇಳಾ!

ಪರಮಪದವಿಯನೀವ ಚೆನ್ನ ಸೊಡ್ಡಳನಿದ್ದಂತೆ, ಸಾವದೇವರ ನೋಂತರೆ, ಕಾವುದೆ ನಿನ್ನ? 


ಇದು ಬಸವಣ್ಣನವರ ಸಮಕಾಲೀನರಾದ ಸೊಡ್ಡಳ ಬಾಚರಸರ ವಚನ. ``ಸೊಡ್ಡಳ'' ಅಥವಾ ``ಮಹಾದಾನಿ ಸೊಡ್ಡಳ'' - ಇದು ಬಾಚರಸರ ವಚನಾಂಕಿತ. ಬಾಚರಸರು ಬಿಜ್ಜಳನ ಅರಮನೆಯಲ್ಲಿ `ಕರಣಿಕ' ವೃತ್ತಿಯನ್ನು ಮಾಡಿಕೊಂಡಿದ್ದರು. ``ಕರಣಿಕ'' ಅಂದರೆ ಲೆಕ್ಕ ಬರೆಯುವವನು ಎಂದರ್ಥ. ಆ ಕಾಲದ ``ಕರಣಿಕ'' ಎಂದರೆ 
ಈ ಕಾಲದ "C. A.'' (Chartered Accountant) ಗಳಿದ್ದ ಹಾಗೆ. ಶಿವಶರಣ ಆದಯ್ಯನವರ ಹಾಗೆ ಬಾಚರಸರು ಕೂಡ ಸೌರಾಷ್ಟ್ರ ಸೋಮೇಶ್ವರನ ಪರಮಭಕ್ತರು. ಅಷ್ಟು ಮಾತ್ರವಲ್ಲ, ಬಾಚರಸರು ತಮ್ಮನ್ನು ತಾವು ಬಸವಣ್ಣನವರ `ಆಪ್ತ-ಪರಮಾಪ್ತ' ವಲಯದಲ್ಲಿ ಗುರುತಿಸಿಕೊಂಡಿದ್ದರು. 
``ನೇರನುಡಿ'' ಮತ್ತು ``ದಿಟ್ಟನಡೆ''ಗೆ ಬಾಚರಸರು ಹೆಸರುವಾಸಿ. ಅದು ಯಾರೇ ಇರಲಿ, ಅವರು ಇದ್ದದ್ದನ್ನು ಇದ್ದಕ್ಕಿದ್ದಂತೆ ಮುಖಕ್ಕೇನೇ ಹೇಳಿಬಿಡುತ್ತಿದ್ದರು. ಇದು ಕಾರಣವಾಗಿ, ಅದೆಷ್ಟೋ ಸಲ ಬಾಚರಸರು ಬೇರೆಯವರೊಂದಿಗೆ `ನಿಷ್ಠುರ'ವನ್ನು ಕಟ್ಟಿಕೊಂಡದ್ದು ಕೂಡ ಉಂಟು. ಮುಚ್ಚುಮರೆ, ಮುಲಾಜುಗಳಿಲ್ಲದೆ ನೇರವಾಗಿ ಮಾತನಾಡುವುದು ಬಹುತೇಕ ಶರಣರ ಹುಟ್ಟುಗುಣ. ಎಲ್ಲೋ ಅಲ್ಲಲ್ಲಿ ಬಸವಣ್ಣ, ಚೆನ್ನಬಸವಣ್ಣನವರಂಥ ಒಬ್ಬಿಬ್ಬರು ಮಾತ್ರ ಬೇರೊಬ್ಬರ ಮಜರ್ಿ, ಮುಲಾಜುಗಳನ್ನು ಹಿಡಿದುಕೊಂಡು ನಮ್ರ-ವಿನಮ್ರವಾಗಿ ಮಾತನಾಡುವುದನ್ನು ರೂಢಿಸಿಕೊಂಡಿದ್ದರು. ಅವರೊಬ್ಬಿಬ್ಬರನ್ನು ಬಿಟ್ಟರೆ ಇನ್ನುಳಿದ ಬಹುತೇಕ ಶರಣರೆಲ್ಲರೂ ಅಪ್ಪಟ ``ಫೈರ್ ಬ್ರ್ಯಾಂಡ್''!! ಅವರ ಮಾತುಗಳು ಬೆಂಕಿಚೆಂಡುಗಳಿದ್ದ ಹಾಗೆ. ಅಕ್ಷರಶಃ ಅವರ ಮಾತುಗಳು ``ಆಗ್ ಕಾ ಗೋಲಾ''ನೇ ಸರಿ!! 
ಎಲ್ಲರೂ ಸೌಮ್ಯವಾದಿಗಳಾಗಿ ಮುತ್ತಿನ ಹಾರದಂತೆ ಮಾತನಾಡಿಕೊಂಡಿದ್ದರೆ ಸಮಾಜವನ್ನು ತಿದ್ದುವುದು, ತೀಡುವುದು ಹೇಗೆ? ತಪ್ಪುದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವವರನ್ನು ಸರಿದಾರಿಗೆ ತರುವವರು ಯಾರು? ಎಲ್ಲರೂ ``ನಾವು ನಿಷ್ಠುರರಾಗುವುದಿಲ್ಲ; ಇನ್ನೊಬ್ಬರ ನಿಷ್ಠುರವನ್ನು ನಾವು ಕಟ್ಟಿಕೊಳ್ಳುವುದಿಲ್ಲ'' ಎಂದರೆ ಸಮಾಜವಿದು ಸರಿಹೋಗುವುದು ಯಾವಾಗ? ಮತ್ತು ಅದು ಹೇಗೆ? ಸಮಾಜವನ್ನು ತಿದ್ದುವುದಕ್ಕೆ, ಜನಗಳ ಸರಿ-ತಪ್ಪುಗಳನ್ನು ತೀಡುವುದಕ್ಕೆ ಸೊಡ್ಡಳ ಬಾಚರಸರಂಥ ನಿಷ್ಠುರವಾದಿಗಳು ಮತ್ತು ನ್ಯಾಯವಾದಿಗಳು ಬೇಕೇ ಬೇಕು.
ಪ್ರಸ್ತುತ ವಚನದಲ್ಲಿ, ಬಾಚರಸರು ಭ್ರಮಿತ ಮಾನವ ಮನಸ್ಸನ್ನು ಎದುರಿಟ್ಟುಕೊಂಡು, ಅದನ್ನು `ಅಪರಾಧೀ' ಸ್ಥಾನದಲ್ಲಿ ನಿಲ್ಲಿಸಿಬಿಟ್ಟು ಅದಕ್ಕೆ ಪಾಠಮಾಡುತ್ತಿದ್ದಾರೆ. ನಾವೆಲ್ಲ ತಿಳಿದಿರುವ ಹಾಗೆ, ಮನಸ್ಸು ತುಂಬ ಚಂಚಲ. ತರಲೆ, ತಮಾಷೆ, ತೀಟೆ ಅದರ ಹುಟ್ಟುಗುಣ. ಅದು ಅಂದಣವನೇರಿದ ಸೊಣಗನಂತೆ ಆಡಿಕೊಂಡಿರುತ್ತದೆ. ಮನಸ್ಸು, 
ಇದು ಮನಸ್ಸು ತಾನೆ? ಯಾರ ಮನಸ್ಸಾದರೇನಂತೆ? ಹರಿಯ ಮನಸ್ಸಾದರೇನು? ಹರನ ಮನಸ್ಸಾದರೇನು? ಸಾಮಾನ್ಯವಾಗಿ ಮನಸ್ಸಿದು `ಎಡವಟ್ಟು' ದಾರಿಯಲ್ಲಿ ಹೋಗುವುದೇ ಹೆಚ್ಚು. ಅದನ್ನು ನಿಲ್ಲಿಸಿಕೊಂಡು ಆಗಾಗ್ಗೆ ಪ್ರಾಥಮಿಕ ಶಾಲಾಶಿಕ್ಷಕರ ಹಾಗೆ ಪಾಠಮಾಡುತ್ತಲೇ ಇರಬೇಕು.
ತನ್ನ ಬಳಿ ಏನೇ ಇದ್ದರೂ ಸಹ ಮತ್ತು ಏನೆಲ್ಲ ಇದ್ದರೂ ಸಹ ಇನ್ನೊಂದಕ್ಕೆ ಆಸೆಪಡುವುದು ಮನಸ್ಸಿನ `ಜನ್ಮಜಾತ' ಸ್ವಭಾವ. ತನ್ನ ಮನೆಯಲ್ಲಿ ಅಪ್ಸರೆಯಂಥ ಹೆಂಡತಿ ಇದ್ದರೂ ಅಕ್ಕಪಕ್ಕದ ಮನೆಗಳ ಹೆಣ್ಣುಮಕ್ಕಳ 
ಮೇಲೆ ಕಣ್ಣುಹಾಕಿಕೊಂಡಿರುವ ಕೆಟ್ಟ ಚಾಳಿ ಮನಸ್ಸಿಗಿದೆ. ತನ್ನ ತಟ್ಟೆಯಲ್ಲಿ ಮೃಷ್ಟಾನ್ನವಿದ್ದರೂ ಇನ್ನೊಬ್ಬರ ತಟ್ಟೆಯನ್ನು ನೋಡಿಕೊಂಡು ಜೊಲ್ಲು ಸುರಿಸಿಕೊಂಡಿರುವುದು ಅದರ ಖಾಸಾ `ಖಯಾಲಿ'!! ಮನಸ್ಸು ಅಕ್ಷರಶಃ ಕೋತಿಯೇ ಸರಿ. ಸಾಧು-ಸಜ್ಜನರು ಅದಕ್ಕೆ `ಲಗಾಮು' ಹಾಕಿಕೊಂಡು ಅದನ್ನು ತಮ್ಮ ಅಂಕಿತದಲ್ಲಿಟ್ಟುಕೊಂಡಿರುತ್ತಾರೆ. ದುರ್ಜನರು ಮಾತ್ರ ಅದಕ್ಕೆ ಕಡಿವಾಣಹಾಕದೆ ಸ್ವಾತಂತ್ರ್ಯಕೊಟ್ಟು ಅದನ್ನು ಎಲ್ಲೆಂದರಲ್ಲಿ ಸ್ವೇಚ್ಛೆಯಿಂದ ತಿರುಗಾಡಿಕೊಂಡಿರಲು- ಬಿಟ್ಟಿರುತ್ತಾರೆ. 
ಪ್ರಸ್ತುತ ವಚನದಲ್ಲಿ ಚಪಲ ಚೆನ್ನಿಗರಾಯನಂತಿರುವ ಮಾನವ ಮನಸ್ಸಿಗೆ ಬಾಚರಸರು ಬುದ್ಧಿಹೇಳುತ್ತಿದ್ದಾರೆ. ಅವರು ಮನಸ್ಸಿಗೆ ಕೇಳುತ್ತಿದ್ದಾರೆ, ``ಎಲೈ ಭ್ರಮಿತ ಮಾನವನ ಹುಚ್ಚು ಮನಸ್ಸೇ, ಗಂಗಾ ನದಿಯಲ್ಲಿ ಮಿಂದು ಗಂಜಳದಲ್ಲಿ ಹೊರಳುವರೆ?'' ಎಂದು. ಗಂಗಾನದಿಗೆ ನಮ್ಮ ಸಂಸ್ಕೃತಿಯಲ್ಲಿ ಬಹುದೊಡ್ಡ ಸ್ಥಾನವಿದೆ. ಗಂಗಾ ನದಿಯನ್ನು ನಾವೆಲ್ಲ ಪರಮಪವಿತ್ರ ಎಂದು ಭಾವಿಸುತ್ತೇವೆ. ಗಂಗೆಯನ್ನು ನಾವುಗಳು ಬರೀ `ಗಂಗೆ' ಎಂದು ಕರೆಯದೆ ಅದನ್ನು `ದೇವಗಂಗೆ' ಎಂದು ಕರೆಯುತ್ತೇವೆ. ``ಗಂಗಾ ಪಾಪಂ, ಶಶೀ ತಾಪಂ, ದೈನ್ಯಂ ಕಲ್ಪತರುಸ್ತಥಾ'' ಎಂಬ ಮಾಲಿಕೆಯ ಈ ವಿಧದ ಗೌರವಕ್ಕೆ ಗಂಗಾನದಿ ಪಾತ್ರವಾಗಿದೆ. ಇಂಥ ಪರಮ ಪರಿಶುದ್ಧ ಗಂಗಾ ನದಿಗೆ ಹೋಗಿಬಿಟ್ಟು ಅಲ್ಲಿ ಸ್ನಾನಮಾಡಿ ಬಂದಾದ ಮೇಲೆ ಯಾರಾದರೂ ಗಂಜಳದಲ್ಲಿ ಹೊರಳಾಡುತ್ತಾರೆಯೇ? ``ಗಂಜಳ'' ಅಂದರೆ ಹೊಲಸು, ಕಸ, ಶಗಣಿ ಎಂದರ್ಥ. ಗಂಗೆಯಲ್ಲಿ ಸ್ನಾನಮಾಡಿ ಗಂಜಳದ ತುಂಬ ಹೊರಳಾಡಿದರೆ ಲೌಕಿಕವು ಏನನ್ನುತ್ತದೆ? ಅಂಥ ವ್ಯಕ್ತಿಯನ್ನು ಲೌಕಿಕವು ಹುಚ್ಚ, ದಡ್ಡ, ಅವಿವೇಕಿ ಎಂದು ಕರೆಯುತ್ತದೆ. ಆಂಗ್ಲಭಾಷೆಯಲ್ಲಿ 
ಅಂಥ ವ್ಯಕ್ತಿಗೆ `ಸ್ಟುಪಿಡ್' ಎಂದು ಕರೆಯುತ್ತಾರೆ. ಅದೇ ರೀತಿ ಗಂಗೆಯಲ್ಲಿ ಮಿಂದು ಬಂದ ಮನಸ್ಸು ಗಂಜಳದಲ್ಲಿ ಹೊರಳಾಡಿದರೆ ಮತ್ತು ಉರುಳಾಡಿದರೆ ಅದು `ಸ್ಟುಪಿಡ್' ಅಲ್ಲದೆ ಮತ್ತೇನು?
ಮತ್ತೆ ಮುಂದುವರಿದು ಬಾಚರಸರು ಕೇಳುತ್ತಾರೆ, ``ಎಲೈ ಮರುಳ ಮನಸ್ಸೇ, ಚಂದನವಿದ್ದಂತೆ ದುರ್ಗಂಧವ ಮೈಯಲ್ಲಿ ಪೂಸುವರೆ?'' ಎಂದು. ಮೈಗೆ ಹಚ್ಚಿಕೊಳ್ಳಲೆಂದು ಕಣ್ಣೆದುರಿಗೇನೇ ದೊಡ್ಡ ದೊಡ್ಡ ಹರಿವಾಣಗಳಲ್ಲಿ ಚಂದನವನ್ನು (ಗಂಧವನ್ನು) ತೇಯ್ದು ಇಟ್ಟಿದ್ದಾರೆ. ಆ ಚಂದನವನ್ನು ಮೈಗೆ ಹಚ್ಚಿಕೊಂಡರೆ ಅದು ಧರ್ಮ. ಅದನ್ನು ಬಿಟ್ಟು ದುರ್ಗಂಧವನ್ನು ಮೈಗೆ ಹಚ್ಚಿಕೊಳ್ಳುತ್ತೇನೆಂದರೆ ಏನು ಮಾಡುವುದು? ಅದು ದರಿದ್ರ `ಹಣೆಬರಹ' 
ಮತ್ತು `ಕರ್ಮ' ಅಷ್ಟೇ!! ``ಚಂದನ ಇಲ್ಲ'' ಎಂದರೆ ಆ ಮಾತು ಬೇರೆ. ಚಂದನವದು ಸಮೃದ್ಧವಾಗಿ ಇದ್ದಾಗಲೂ ಅದನ್ನು ಆಚೆಗಿಟ್ಟು ಕಸ, ಕೆಸರು, ರಾಡಿ, ಕೊಳಕು..., ಇತ್ಯಾದಿಗಳನ್ನು ಮೈಗೆ ಪೂಸಿಕೊಂಡರೆ (ಲೇಪಿಸಿಕೊಂಡರೆ) ಅದಾರೋ ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡು ಹೊರಗೆ ಬಂದಿದ್ದಾರೆ ಎನ್ನುವ ಹಾಗೆ ಜನಗಳು ತಮ್ಮ ಹುಬ್ಬುಗಳನ್ನು ಹಣೆಗೇರಿಸಿಕೊಂಡು ಆಶ್ಚರ್ಯದಿಂದ ನೋಡುತ್ತಾರೆ. ಜಗತ್ತಿನಲ್ಲಿ ಹುಟ್ಟಿಬಂದಾದ ಮೇಲೆ ಅದಷ್ಟೊಂದು ಸಾಮಾನ್ಯ ಪರಿಜ್ಞಾನ ಕೂಡ ಇಲ್ಲದೆ ಹೋದರೆ ಅದೇನು ಪ್ರಯೋಜನ?
ಬಾಚರಸರು ತಮ್ಮ ಮನಸ್ಸಿಗೆ ಕೇಳುತ್ತಾರೆ, "ಎಲೈ ಮನಸ್ಸೇ, ಸುರಭಿ ಮನೆಯಲ್ಲಿ ಕರೆವುತ್ತಿರೆ, ಹರಿವರೆ ಸೊಣಗನ ಹಾಲಿಂಗೆ?'' ಎಂದು. ``ಸುರಭಿ'' ಅಂದರೆ ಹಸು, ಆಕಳು ಎಂದರ್ಥ. "ಕರೆವುದು'' ಅಂದರೆ ``ಹಾಲುಕೊಡುವುದು'' ಎಂದರ್ಥ. ಮನೆಯಲ್ಲಿ ಕಾಮಧೇನುವಿನಂಥ ಹಸು ಇದೆ. ಅದು ಯಥೇಷ್ಟವಾಗಿ `ಅಮೃತಸದೃಶ' ಹಾಲನ್ನು ಕೊಡುತ್ತಿದೆ. ಅದು ಅಂಥ, ಇಂಥ ಸಾಮಾನ್ಯದ ಹಾಲಲ್ಲ; ಅದು ಪಂಚಾಮೃತಕ್ಕೆ ಸಲ್ಲುವ ಹಾಲು!! ಅಂಥ ಹಸುವಿನ ಹಾಲನ್ನು ಬಿಟ್ಟು ಅದೇಕೆ ಸೊಣಗನ ಹಾಲಿಗೆ ಆಸೆಪಡುವಿ? ``ಸೊಣಗ'' ಎಂದರೆ ನಾಯಿ ಎಂದರ್ಥ. ``ಸೊಣಗನ ಹಾಲು'' ಎಂದರೆ ನಾಯಿಯ ಹಾಲು, ನಾಯ್ ಮೊಲೆವಾಲು ಎಂದರ್ಥ. ಬಾಚರಸರು ಮನಸ್ಸಿಗೆ ``ನಾಯಿ ಹಾಲಿಗೆ ಅದೇಕೆ ಆಸೆಪಡುವಿ?'' ಎಂದು ಕೇಳುತ್ತಾರೆ. ಹಸುವಿನ ಹಾಲೆಲ್ಲಿ? ನಾಯಿಯ ಮೊಲೆಹಾಲೆಲ್ಲಿ? ಒಂದಕ್ಕೊಂದನ್ನು ಸರಿಮಾಳ್ಪರೇ? ``ಸಕ್ಕರೆಗುಪ್ಪಂ ಸರಿಮಾಳ್ಪರೇ?'' ಹಸುವಿನ ಹಾಲನ್ನು ಆಚೆಗೆ ತಳ್ಳಿ ನಾಯಿಹಾಲಿಗೆ ಬಾಯಿಹಾಕಿದರೆ, ಅದರಂಥ ಮರುಕಪಡುವ ಸಂಗತಿ ಇನ್ನೊಂದೆಲ್ಲಾದರೂ ಉಂಟೇ? ತಾನಾಗಿಯೇ ಒಲಿದು ಬಂದ `ಸುರಭಿಕ್ಷೀರ' ಯೋಗಕ್ಕೆ ಬೆನ್ನುಹಾಕಿ `ಶುನಕಕ್ಷೀರ'ಕ್ಕೆ ಬಾಯಿಹಾಕಿದರೆ ಅದು ಮೂರ್ಖತನದ ಪರಮಾವಧಿ ಮತ್ತು ಪರಾಕಾಷ್ಠೆಯಲ್ಲದೆ ಮತ್ತೇನು?
ಬಾಚರಸರು ಮತ್ತೆ ಮುಂದುವರಿದು ಮನಸ್ಸಿಗೆ ಕೇಳುತ್ತಾರೆ, ``ಎಲೈ ಭ್ರಮಿತ ಮಾನವ ಮನಸ್ಸೇ, ಬಯಸಿದಮೃತವಿದ್ದಂತೆ ಅಂಬಿಲವ ನೆರೆದುಂಬುವುದು ಸರಿಯೇ?'' ಎಂದು. ``ಸಾಕ್ಷಾತ್ ನೀನು ಇಷ್ಟಪಟ್ಟಂಥ ಮತ್ತು ಬಯಸಿದಂಥ ಅಮೃತವೇ ನಿನ್ನ ಕಣ್ಣೆದುರಿಗಿದೆ. ಅದನ್ನು ಸೇವಿಸುವುದನ್ನು ಬಿಟ್ಟು ಅಂಬಲಿಯನ್ನು ಸೇವಿಸುತ್ತೇನೆ, ಅಂಬಲಿಯನ್ನು ಉಣ್ಣುತ್ತೇನೆ ಎಂದರೆ ಏನು ಮಾಡುವುದು? ಅಮೃತವನ್ನು ಕೈಯಲ್ಲಿಟ್ಟುಕೊಂಡು ಅಂಬಲಿಗೆ ಅದೇಕೆ ಆಸೆಪಡುವಿ? ಅಮೃತವನ್ನು ಗಮನಬಾಹಿರವಾಗಿಸಿಬಿಟ್ಟು ಅಂಬಲಿಗೆ ಆಸೆಪಡುವುದು ಎಂದರೆ ಅದು ಅವಿವೇಕದ ಪರಮಾವಧಿಯಲ್ಲದೆ ಮತ್ತೇನು? ಈ ರೀತಿ ರಾಜ್ಯವನ್ನು ಬಿಟ್ಟು ತ್ಯಾಜ್ಯಕ್ಕೆ ಕೈಹಾಕುವವರನ್ನು ಬಾಚರಸರು ``ಭ್ರಮಿತ ಮಾನವರು'' ಎಂದು ಕರೆದಿದ್ದಾರೆ.
ಬಾಚರಸರು ಮಾನವ ಸಹಜವಾದ ತಮ್ಮ ಭ್ರಮಿತ ಮನಸ್ಸಿಗೆ ಹೇಳುತ್ತಿದ್ದಾರೆ, ``ಪರಮಪದವಿಯನೀವ ಚೆನ್ನ ಸೊಡ್ಡಳನಿದ್ದಂತೆ, ಸಾವದೇವರ ನೋಂತರೆ, ಕಾವುದೆ ನಿನ್ನ?'' ಎಂದು. ``ಪರಮ ಪದವಿಯನ್ನು ನಿನಗೆ `ಧಾರೆ' ಎರೆದು ಕೊಡುವ ಸೊಡ್ಡಳ ನಿನ್ನ ಬಳಿಯಲ್ಲಿಯೇ ಇದ್ದಾನೆ. ಆತ ನಿನಗೆ ಪರಮ ಪದವಿಯನ್ನು ಕೊಡಲು ಸಿದ್ಧನಾಗಿದ್ದಾನೆ. ಇಂಥ ಸಂದರ್ಭ, ಸನ್ನಿವೇಶದಲ್ಲಿ ಬೇರೆ ಆ ದೇವರು, ಈ ದೇವರು, ಸಾವದೇವರು ಮತ್ತು ಸಾವಿರದೇವರುಗಳ ಬಳಿಗೆ ಅದೇಕೆ ಹೋಗುವಿ? ನಿನ್ನನ್ನು ``ಕಾಯುವಾತ'' ಮತ್ತು ``ಕಾಪಾಡುವಾತ'' ಸೊಡ್ಡಳ ಮಾತ್ರ!! ಅವನನ್ನು ಭಜಿಸಿಕೊಂಡಿರು, ಪೂಜಿಸಿಕೊಂಡಿರು ಮತ್ತು ಜಪಿಸಿಕೊಂಡಿರು. ಬೇರೆ ನೂರಾರು, ಸಾವಿರಾರು `ಸಾವ' ಮತ್ತು `ಕೆಡುವ' ದೇವರುಗಳ ಕುರಿತು ಜಪ, ತಪ, ವ್ರತ, ಉಪವಾಸ... ಮಾಡಿಕೊಂಡಿದ್ದರೆ ಅದೇನು ಪ್ರಯೋಜನ? ಅವು ನಿನ್ನನ್ನು ಕಾಯುವವೇ? ಅವು ನಿನ್ನನ್ನು ಕಾಪಾಡುವುದು ಎಲ್ಲಾದರೂ ಉಂಟೇ? ``ಕಾವುದು'' ಎಂದರೆ ``ಕಾಯುವುದು'', ``ಕಾಪಾಡುವುದು'', ``ರಕ್ಷಿಸುವುದು'' ಎಂದರ್ಥ. 
``ನಿನಗೆ ಬ್ರಹ್ಮಪದವಿ, ವಿಷ್ಣುಪದವಿ, ರುದ್ರಪದವಿಗಳಿಗಿಂತಲೂ ಮಿಗಿಲಾದ ಪರಮಪದವಿಯನ್ನು ನೀಡಲು ಸಾಕ್ಷಾತ್ ನಿನ್ನ ಇಷ್ಟದೈವ ``ಚೆನ್ನ ಸೊಡ್ಡಳ'' ಕಾದುಕೊಂಡಿದ್ದಾನೆ. ಅವನತ್ತ ಗಮನಹರಿಸು. ಅಷ್ಟು ಮಾತ್ರ ಸಾಕು!!
ಇನ್ನು ಬೇರೆ ಯಾವ ದೇವರೂ ಬೇಡ'' ಎಂದು ಬಾಚರಸರು ತಮ್ಮ ಮನಸ್ಸಿಗೆ ತಿಳಿಹೇಳುವುದನ್ನು ನಾವೆಲ್ಲ ಕೇಳಿಸಿಕೊಂಡಿದ್ದೇವೆ. ಅದೇ ರೀತಿ ನಾವುಗಳು ಕೂಡ ನಮ್ಮ ಇಷ್ಟದೈವ, ಆರಾಧ್ಯದೈವಗಳನ್ನು ಹೊರತುಪಡಿಸಿ 
ಬೇರೆ ಆ ದೈವ, ಈ ದೈವ ಎಂದು ನೂರು ದೈವ, ನೂರಾರು ದೈವ, ದೇವರುಗಳ ಹಿಂದೆ ಅಲೆಯುವುದು ಬೇಡ ಮತ್ತು ಆ ದೇವರುಗಳನ್ನು ಹುಡುಕಿಕೊಂಡು ಅಲ್ಲಿ ಇಲ್ಲಿ ಹೋಗುವುದು ಬೇಡ. ಹಾಗೇನಾದರೂ ನಾವು ಮಾಡಿದ್ದೇ ಆದರೆ ಕಂಕುಳಲ್ಲಿ ಕೂಸಿಟ್ಟುಕೊಂಡು ಊರೆಲ್ಲ ಹುಡುಕಿದ ಆ ತಾಯಿಯಂತೆ ನಮ್ಮ ಸ್ಥಿತಿ ನಗೆಪಾಟಲಾಗುತ್ತದೆ 
ಮತ್ತು ಹಾಸ್ಯ-ಅಪಹಾಸ್ಯಗಳಿಗೆ ವಸ್ತು-ವೇದಿಕೆಯಾಗುತ್ತದೆ. ಆದ್ದರಿಂದ ಅಂಥ ಗಂಭೀರ-ಘನಗಂಭೀರ ಸಂದರ್ಭ-ಸನ್ನಿವೇಶಗಳಿಗೆ ನಾವು-ನೀವುಗಳು ಆಹಾರವಾಗುವುದು ಬೇಡ ಎಂಬುವುದು ಈ ವಚನದ ತಾತ್ಪರ್ಯ ಮತ್ತು 
ಈ ವಚನಾಂತರಂಗದ ಆಶಯ.   

ಡಾ|| ಶ್ರೀ ಶಿವಾನಂದ ಶಿವಾಚಾರ್ಯರು 

ಹಿರೇಮಠ, ತುಮಕೂರು

1 comment: