Sunday, November 29, 2015

Good Evening On 28th November 2015

ನೆಲ ನೆಲವೆಂದು ಹೊಡೆದಾಡುವುದು “ಲ್ಯಾಂಡ್ ಮಾಫಿಯಾ’..!

ಕುಲ ಕುಲವೆಂದು ಹೊಡೆದಾಡುವುದು ‘ಕೋಮು ಮಾಫಿಯಾ’...!!!

- ಇದು ಕನಕದಾಸ ಉವಾಚ

ಡಾ. ಶ್ರೀ ಶಿವಾನಂದ ಶಿವಾಚಾರ್ಯರು ತುಮಕೂರು ೨೮ : “ಕನಕದಾಸರು ಸಾಮಾನ್ಯರಲ್ಲ. ಅವರು ಆ ದೇವರಿಗೇನೇ, ಸಾಕ್ಷಾತ್ ಆ ಕೃಷ್ಣಪರಮಾತ್ಮನಿಗೇನೇ ‘ರೈಟ್ ಟರ್ನ್’, ‘ಲೆಫ್ಟ್ ಟರ್ನ್’ ಹೇಳಿದ ಮಹಾನುಭಾವರು. ಉಡುಪಿಯ ಆ ಶ್ರೀಕೃಷ್ಣ ಕನಕದಾಸರ ಕರುಳಿನ ಕರೆಗೆ ಓಗೊಟ್ಟು, ಅವರ ಭಕ್ತಿಗೆ ಮನಸೋತು ಕನಕದಾಸರತ್ತಲೇ ತನ್ನನ್ನು ತಾನು ತಿರುಗಿಸಿಕೊಂಡು ದೇವಾಲಯದ ಹೊರಗಡೆ ನಿಂತುಕೊಡಿದ್ದ ಅವರಿಗೆ ದರ್ಶನ ನೀಡುತ್ತಾನೆ. ಸಾಮಾನ್ಯವಾಗಿ “ಭಕ್ತರು ಭಗವಂತನತ್ತ ಮುಖಮಾಡಬೇಕು” ಎಂದು ಹೇಳುವುದು ರೂಢಿಯಲ್ಲಿರುವ ಮಾತು. ಆದರೆ ಕನಕದಾಸರ ವಿಷಯದಲ್ಲಿ ಈ ಮಾತು ತಿರುವು-ಮುರುವು ಆಗಿದೆ. ಕನಕದಾಸರ ವಿಷಯದಲ್ಲಿ ಭಗವಂತನೇ ಅವರತ್ತ ಮುಖಮಾಡುತ್ತಾನೆ. ಇದೊಂದು ಬಹುದೊಡ್ಡ ಇತಿಹಾಸವೂ ಅಹುದು. ಇದೊಂದು ಬಹುದೊಡ್ಡ ಪವಾಡವೂ ಅಹುದು. ಕನಕದಾಸರದು ಅಸಾಧ್ಯವನ್ನು ಸಾಧಿಸಿದರು, ಅಸಂಭವವನ್ನು ಹೆತ್ತುಕೊಟ್ಟರು. ಅವರೊಂದು ಅದಮ್ಯ ಚೇತನ” ಎಂದು ತುಮಕೂರು ಹಿರೇಮಠಾಧ್ಯಕ್ಷರಾದ ಡಾ. ಶಿವಾನಂದ ಶಿವಾಚಾರ್ಯರು ನಿನ್ನೆ ಹಿರೇಮಠದಲ್ಲಿ ಕನಕದಾಸ ಜಯಂತಿಯ ನಿಮಿತ್ತ ವಿಶೇಷ ಉಪನ್ಯಾಸವನ್ನು ನೀಡುತ್ತ ಈ ಮೇಲಿನ ಮಾತುಗಳನ್ನು ಹೇಳಿದರು. ಶ್ರೀ ಶ್ರೀಗಳು ಮತ್ತೆ ಮುಂದುವರಿದು, “ನೆಲ ನೆಲವೆಂದು ಹೊಡೆದಾಡುವುದು ‘ಲ್ಯಾಂಡ್ ಮಾಫಿಯಾ’ ಆದರೆ ಕುಲ ಕುಲವೆಂದು ಹೊಡೆದಾಡುವುದು “ಕೋಮು ಮಾಫಿಯಾ’!! ಇದು ನಮ್ಮ ಉವಾಚವಲ್ಲ. ಇದು ಅಪ್ಪಟ ಶ್ರೀ ಶ್ರೀ ಕನಕದಾಸ ಉವಾಚ. ಕನಕದಾಸರು ಕುಲ, ಕುಲೀನ, ಕುಲಜರ ಕುರಿತು ತಮ್ಮ ‘ಅಧಿಕೃತ’ ವಕ್ತವ್ಯವನ್ನು ದಾಖಲಿಸಿದ್ದಾರೆ. ಅವರ ದೃಷ್ಟಿಯಲ್ಲಿ, ಪಶುಸಂಗೋಪನೆಯ ಹಾಗೆ ‘ನಾನು’ (ಅಹಂ=ಇಗೋ) ಇದನ್ನು ‘ಸಂಗೋಪನೆ’ ಮಾಡಿಕೊಂಡಿರುವವರು ಕುಲಜರೂ ಅಲ್ಲ, ಅವರು ಕುಲೀನರೂ ಅಲ್ಲ. ಅವರ ಪ್ರಕಾರ “ನಾನು, ನನ್ನದು” ಎಂಬ ಈ ಮೋಹ-ವ್ಯಾಮೋಹವನ್ನು ಅಳಿದವರು, ಮತ್ತದನ್ನು ಸಂಹರಿಸಿದವರು ಕುಲಜರು ಮತ್ತು ಅವರು ಕುಲೀನರು. ಕನಕದಾಸರು ನಾದ-ವೇದಗಳ ಕೂಡಲಸಂಗಮ. ಅಷ್ಟು ಮಾತ್ರವಲ್ಲ, ಅವರು ಕನ್ನಡನಾಡಿನ ಭಕ್ತಿಕ್ರಾಂತಿಯ ಹರಿಕಾರರು ಕೂಡ ಅಹುದು. ಪುರಂದರದಾಸರು ಮತ್ತು ಕನಕದಾಸರು ಕನ್ನಡನಾಡಿನ ಭಕ್ತಿಸಾರಸ್ವತದ ಎರಡು ಕಣ್ಣುಗಳು. ಅವರಿಬ್ಬರೂ ನಮ್ಮ ಕನ್ನಡನಾಡಿನ ದಾಸಸಾಹಿತ್ಯದ ಸಯಾಮಿಗಳು!! ಕನಕದಾಸರು ಬರೀ ಭಕ್ತರಲ್ಲ; ಅವರು ಬರೀ ದಾಸರಲ್ಲ. ಅವರೊಂದು ಜ್ಞಾನ-ವಿಜ್ಞಾನ-ಸುಜ್ಞಾನಗಳ ಸಂಗಮಕ್ಷೇತ್ರ. ಅವರೊಂದು ‘ಬಹುಮುಖಿ’ ಪ್ರತಿಭಾಸಂಗಮ. ಕನಕದಾಸರು ಗೀತಕಾರ, ಗೀತರಚನಾಕಾರರೂ ಅಹುದು, ಅವರು ಸಂಗೀತಜ್ಞರೂ ಅಹುದು, ಅವರು ತತ್ತ್ವಜ್ಞಾನಿ, ದಾರ್ಶನಿಕರೂ ಅಹುದು. ಅವರು ಸಂತರೂ ಅಹುದು. ಅವರು ಸಮಾಜಸುಧಾರಕರೂ ಅಹುದು. ಅವರು ಶರಣರೂ ಅಹುದು.ಅವರು ಸಾತ್ತ್ವಿಕರೂ ಅಹುದು. ಒಟ್ಟಿನಲ್ಲಿ ನಮ್ಮ ದೃಷ್ಟಿಯಲ್ಲಿ ಕನಕದಾಸರೊಂದು ಭಕ್ತಿಯ ಸಜೀವ ರೂಪ ಮತ್ತು ಅವರೊಂದು ಭಕ್ತಿಯ ಪರಾಕಾಷ್ಠೆ. ಈ ದೇಶ ಕಂಡ ಒಂದು ಅಪರೂಪದ ವ್ಯಕ್ತಿತ್ವ ನಮ್ಮ ಕನಕದಾಸರು. ಇತ್ತೀಚಿನ ದಿನಗಳಲ್ಲಿ “ಕುಲ ಕುಲವೆಂದು ಹೊಡೆದಾಡಬೇಡಿ. ಕುಲ ಕುಲವೆಂದು ಹೊಡೆದಾಡಿ ಕುರುಕುಲವಾಗಬೇಡಿ” ಎಂದು ಹೇಳಿದ ಆ ಮಹಾನುಭಾವ, ಭಕ್ತಶಿರೋಮಣಿ ಕನಕದಾಸರನ್ನು ಮತ್ತೆ ಮತ್ತೆ ಒಂದೇ ಕುಲಕ್ಕೆ ಕಟ್ಟಿಹಾಕುವುದು ಅದಾವ ನ್ಯಾಯ? ಅದಾವ ನೀತಿ? ಅದು ನ್ಯಾಯವೂ ಅಲ್ಲ; ಅದು ನೀತಿಯೂ ಅಲ್ಲ. ಅದೊಂದು ರಾಜಕೀಯ ಮತ್ತು ಅದೊಂದು ರಾಜಕೀಯದ ಚದುರಂಗದಾಟ ಅಷ್ಟೇ. ವಾಲ್ಮೀಕಿ, ಬಸವಣ್ಣ, ಮಹಾವೀರ, ಅಂಬೇಡ್ಕರ್ ಇವರೆಲ್ಲರ ಹಾಗೆ ಕನಕದಾಸರೂ ಕೂಡ ನಮ್ಮ ಜಾತಿ ರಾಜಕೀಯ ಚದುರಂಗದ ದಾಳವಾಗುತ್ತಿದ್ದಾರೆ, ಅಷ್ಟೇ” ಎಂದು ಹೇಳಿದರು. ಉಪನ್ಯಾಸಕ್ಕೆ ಮೊದಲು ಶ್ರೀಮಠದ ವಿದ್ಯಾರ್ಥಿಗಳು ಮತ್ತು ಶ್ರೀಮಠದ ಭಕ್ತರು ಸಾಂಕೇತಿಕವಾಗಿ ಕನಕದಾಸರ ಭಾವಚಿತ್ರದೆದುರಿನಲ್ಲಿ ದೀಪ ಬೆಳಗಿಸಿ ಕನಕದಾಸರ ಭಾವಚಿತ್ರ ಮೇಲೆ ಹೂಮಳೆ, ಪುಷ್ಪವೃಷ್ಟಿಗರೆದರು.

No comments:

Post a Comment