Wednesday, November 18, 2015

೨೦೧೫, ಆಗಸ್ಟ್ ೧೪
ವಚನಾಂತರಂಗ

ಉಂಡರೆ ಭೂತನೆಂಬರು, ಉಣದಿರ್ದಡೆ ಚಕೋರಿ ಎಂಬರು
ಊರೊಳಗಿರ್ದಡೆ ಸಂಸಾರಿ ಎಂಬರು, ಅಡವಿಯೊಳಗಿರ್ದಡೆ ಮರ್ಕಟನೆಂಬರು
ಮಾತನಾಡಿದರೆ ಪಾಪಕರ್ಮಿ ಎಂಬರು, ಮಾತನಾಡದಿರ್ದಡೆ ಮುಸುಕಕರ್ಮಿ ಎಂಬರು
ಮಲಗದಿರ್ದಡೆ ಚೋರನೆಂಬರು, ಮಲಗಿರ್ದಡೆ ಜಡದೇಹಿ ಎಂಬರು 
ಇಂತೀ ವಸುಧೆಯೊಳಗೆ ಎಂಟು ವಿಧವ ಕಳೆಯಲಳವಲ್ಲ ಕಾಣಾ ಕಲಿದೇವರ ದೇವಾ. 
ಇದು ಮಡಿವಾಳ ಮಾಚಿದೇವರ ವಚನ. ಹನ್ನೆರಡನೆಯ ಶತಮಾನದ ಪ್ರಮುಖ ಶರಣರಲ್ಲಿ ಮಾಚಿದೇವರು ಕೂಡ ಒಬ್ಬರು. ಮಾಚಿದೇವರು ಧೈರ್ಯ, ಸ್ಥೆರ್ಯ, ಸಾಹಸಗಳ ಮೂರ್ತರೂಪ. ಸಮಯ, ಸಂದರ್ಭ, ಸನ್ನಿವೇಶಗಳಿಗೆ ಎದೆಕೊಟ್ಟು ನಿಲ್ಲುವ ತಾಕತ್ತು ಅವರಲ್ಲಿತ್ತು. ಮಾಚಿದೇವರದು ‘ಜನಪರ’ ಮತ್ತು ‘ಹೋರಾಟಪರ’ ಮನಸ್ಸು.
ಅಣ್ಣ ಬಸವಣ್ಣ, ಚೆನ್ನಬಸವಣ್ಣ ಇವರುಗಳ ಹಾಗೆ ಮಾಚಿದೇವರು ತುಂಬ ಸೌಮ್ಯ ಅಲ್ಲ. 
ಅವರೊಂದಷ್ಟು “ಟಫ್ & ಹಾರ್ಡ್”. ಅವರ ಮಾತು ಮತ್ತು ಮನಸ್ಸು - ಎರಡೂ ಗಟ್ಟಿ.
 ತಮಗೇನು ಹೇಳಬೇಕಿದೆಯೋ ಮತ್ತು ಹೇಳಬೇಕೆಂದಿದೆಯೋ ಅದನ್ನವರು 
ನೇರವಾಗಿ ಮತ್ತು ಒಂದಷ್ಟು ಖಾರವಾಗಿಯೇ ಹೇಳುತ್ತಾರೆ. 
ಬಸವಣ್ಣನವರ ಹಾಗೆ ಎಲ್ಲದಕ್ಕೂ ತಲೆಬಾಗಿಕೊಂಡು ಮತ್ತು 
‘ಕೈ’ ಮುಗಿದುಕೊಂಡಿರುವ ‘ಕಾಂಪ್ರೊಮೈಜ್’ ಮಾದರಿಯ ಸ್ವಭಾವ ಅವರದಲ್ಲ. 
ಮಾಚಿದೇವರದು ಒಂದು ತೆರನಾದ “ನೋ ಕಾಂಪ್ರೊಮೈಜ್” ಮತ್ತು “ಫುಲ್ ಕಮಿಟ್‌ಮೆಂಟ್” ಸ್ವಭಾವ. ಶರಣಸಮುದಾಯದ ಮಧ್ಯದಲ್ಲಿ ಅವರಿಗೆ ‘ಯೋಧ’ (ಜೈ ಜವಾನ್) ‘ಇಮೇಜ್’ ಇತ್ತು.
 ಮಾಚಿದೇವರಲ್ಲಿ ‘ಪ್ರವಾಹದ ವಿರುದ್ಧ’ ಮತ್ತು ‘ಪ್ರಭಾವದ ವಿರುದ್ಧ’ ಈಜುವ ಛಲವೂ ಇತ್ತು, ಬಲವೂ ಇತ್ತು.
 ಇದು ಕಾರಣವಾಗಿ ಅವರು ಶರಣಕ್ರಾಂತಿಯ ಮುಂಚೂಣಿಯಲ್ಲಿ ನಿಲ್ಲುವುದಕ್ಕೆ ಸಾಧ್ಯವಾಯಿತು. 
ಪ್ರಸ್ತುತ ವಚನದಲ್ಲಿ ಮಾಚಿದೇವರು ‘ಜನಗಳು’ ಮತ್ತು ‘ಜನಾಭಿಪ್ರಾಯ’ - ಈ ಕುರಿತು ತಮ್ಮ ಅಧಿಕೃತ ವಕ್ತವ್ಯವನ್ನು ದಾಖಲಿಸಿದ್ದಾರೆ. “ಜನರು ಹೇಗಿದ್ದರೂ ಅಂತಾರೆ, ಆಡಿಕೊಳ್ಳುತ್ತಾರೆ” ಎಂಬುವುದು ಇಲ್ಲಿನ ತಾತ್ಪರ್ಯ. ಜನಗಳಿಂದ ಏನನ್ನೂ ಅನ್ನಿಸಿಕೊಳ್ಳಬಾರದೆಂದು ನಾವುಗಳು ಅದೆಷ್ಟೇ “ದೂಧ್ ಕಾ ಧುಲಾ ಹುವಾ” ಆಗಿ ವರ್ತಿಸಿಕೊಂಡಿದ್ದರೂ ಜನಗಳು, ಏನಾದರೂ ‘ಐಬು’ ತೋರಿಸಿಬಿಟ್ಟು ನಮ್ಮನ್ನು ಅನ್ನುವುದನ್ನು ಮತ್ತು ಆಡಿಕೊಳ್ಳುವುದನ್ನು ಬಿಡುವುದಿಲ್ಲ. ಜನಾಭಿಪ್ರಾಯವನ್ನು ಯಾವಾಗಲೂ ಪರವಾಗಿರಿಸಿಕೊಂಡಿರುವುದು ಸಾಧ್ಯವೇ ಇಲ್ಲ. ಬರೀ ಮನುಷ್ಯಮಾತ್ರರಿಗೆ ಮಾತ್ರವಲ್ಲ, 
ಆ ಹರಿಹರಬ್ರಹ್ಮಾದಿಗಳಿಗೂ ಕೂಡ ಜನಾಭಿಪ್ರಾಯವನ್ನು ನಿರಂತರವಾಗಿ ಅವರ ಪರವಾಗಿರಿಸಿಕೊಂಡಿರುವುದು ಸಾಧ್ಯವಿಲ್ಲ.  ಅದು ಹೇಗಾದರೂ ಮಾಡಿ, ‘ಶತಾಯ ಗತಾಯ’ ಪ್ರಯತ್ನಮಾಡಿ, ಹೋರಾಡಿ, ಕಷ್ಟಪಟ್ಟಾದರೂ ಸರಿ, ನಾಯಿಯ ಬಾಲವನ್ನು ಕೆಲಕಾಲದ ಮಟ್ಟಿಗಾದರೂ ನೇರವಾಗಿಸಿಕೊಂಡಿರಬಹುದು. ಆದರೆ ಜನಾಭಿಪ್ರಾಯವನ್ನು ಯಾವಾಗಲೂ ಪರವಾಗಿರಿಸಿಕೊಂಡಿರುವುದು ಅಸಾಧ್ಯದ ಮಾತು. ಊಸರವಳ್ಳಿ ಬಣ್ಣ ಬದಲಾಯಿಸುವ ಹಾಗೆ ‘ಜನಾಭಿಪ್ರಾಯ’ ಆಗಾಗ್ಗೆ 
ತನ್ನ ಅಭಿಪ್ರಾಯ ಮತ್ತು ಅಭಿಮತವನ್ನು ಬದಲಾಯಿಸುತ್ತಲೇ ಇರುತ್ತದೆ. ಜನರನ್ನು ತಿದ್ದುವುದು, ಮತ್ತವರನ್ನು ಸಮಾಧಾನಪಡಿಸುವುದು ಮತ್ತು ಅವರ ಅಭಿಪ್ರಾಯವನ್ನು ಪರವಾಗಿರಿಸಿಕೊಳ್ಳುವುದು ಎಂದೂ ಮತ್ತು ಯಾವ ಕಾಲಕ್ಕೂ ಆಗದ ಮಾತು ಮತ್ತು ಅದು ಸಾಧ್ಯವೇ ಇಲ್ಲ. 
ಜನಗಳ ಮನೋಭಾವ ಮತ್ತು ಮನಸ್ಥಿತಿಯನ್ನು ವಿಶ್ಲೇಷಿಸುತ್ತ ಮಾಚಿದೇವರು ಹೇಳುತ್ತಾರೆ,
ಉಂಡರೆ ಭೂತನೆಂಬರು, ಉಣದಿರ್ದಡೆ ಚಕೋರಿ ಎಂಬರು.....
ಊಟಮಾಡುವಾಗ ಒಂದಷ್ಟು ಜಾಸ್ತಿ ಉಂಡರೆ ‘ಭೂತ’ ಎಂದು ಕರೆದು ಭೂತದ ‘ಪಟ್ಟ’ ಕಟ್ಟುತ್ತಾರೆ. 
“ನೋಡು, ದೆವ್ವ ತಿಂದಂಗೆ ತಿಂತಾನೆ” ಅಂತಾರೆ. ಒಂದಷ್ಟು ಜಾಸ್ತಿ ಊಟಮಾಡುವ ಮನುಷ್ಯನಿಗೆ ಭೀಮ, ಬಕಾಸುರ, ವೃಕೋದರ ಎಂದು ಕರೆದು ಹಿಂಸೆ ಮಾಡುತ್ತಾರೆ. ಇನ್ನು ಊಟಮಾಡದೆ ಇರುವವರನ್ನು ಅಥವಾ ತುಂಬ ಕಡಿಮೆ ಊಟ ಮಾಡುವವರನ್ನಾದರೂ ಬಿಡುತ್ತಾರೆಯೇ? ಇಲ್ಲ, ಆತ\ಆಕೆಗೂ ಸಹ ‘ಚಕೋರ’, ‘ಚಕೋರಿ’ ಎಂದು ಕರೆದು ಅವರನ್ನು ಗೇಲಿಮಾಡುತ್ತಾರೆ. ಚಕೋರಪಕ್ಷಿ ಇದು, ಕೇವಲ ಬೆಳದಿಂಗಳಿನಿಂದ ಮತ್ತು ಬೆಳದಿಂಗಳನ್ನುಂಡುಕೊಂಡೇ ಬದುಕುವ ಪಕ್ಷಿ. ಚಕೋರವನ್ನು ‘ಜೊನ್ನಹಕ್ಕಿ’, ‘ಜೊನ್ನವಕ್ಕಿ’ ಎಂದು ಕೂಡ ಕರೆಯುತ್ತಾರೆ. 
“ರವಿ ಕಾಣದ್ದನ್ನು ಕವಿ ಕಾಣುವ” ಕವಿಸಾಮ್ರಾಜ್ಯದ ಕವಿಸಮಯದಲ್ಲಿ ಚಾತಕಪಕ್ಷಿಯು ಮಳೆಹನಿಯನ್ನು ಕುಡಿದು ಜೀವಿಸಿಕೊಂಡಿದ್ದರೆ ಚಕೋರಪಕ್ಷಿಯು ಬೆಳದಿಂಗಳನ್ನೇ ಆಹಾರವಾಗಿಸಿಕೊಂಡು ಅದನ್ನೇ ಸೇವಿಸಿಕೊಂಡು ಬದುಕಿರುತ್ತದೆ. ಬಸವಣ್ಣನವರು ಕೂಡ ತಮ್ಮೊಂದು ವಚನದಲ್ಲಿ “ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ, ಅಂಬುಜಕೆ ಭಾನುವಿನ ಉದಯದ ಚಿಂತೆ” ಎಂದು ಹೇಳಿರುವುದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು. ಜನಗಳು ಉಂಡರೆ ‘ಭೂತ’ ಎಂದು ಗೇಲಿಮಾಡುತ್ತಾರೆ; ಉಣ್ಣದೆ ಇದ್ದರೆ ‘ಚಕೋರ’ ಎಂದು ಗೇಲಿಮಾಡುತ್ತಾರೆ. ಉಂಡರೆ ‘ಭೋಗಿ’ ಅಂತಾರೆ, ಉಣದಿದ್ದರೆ ‘ರೋಗಿ’ ಅಂತಾರೆ. ಹೇಗಿದ್ದರೂ ಜನ ಒಂದಂತಾರೆ, ಒಂದಾಡುತ್ತಾರೆ. ಜನಗಳನ್ನು ಮೆಚ್ಚಿಸುವುದು ಸಾಧ್ಯವೇ ಇಲ್ಲ. 
ಊರೊಳಗಿರ್ದಡೆ ಸಂಸಾರಿ ಎಂಬರು, ಅಡವಿಯೊಳಗಿರ್ದಡೆ ಮರ್ಕಟನೆಂಬರು....
ಊರಿನಲ್ಲಿದ್ದರೆ ಜನರು ‘ಮನೆಹಾಳ’ ಎನ್ನುತ್ತಾರೆ. ಊರು ಬಿಟ್ಟು ಕಾಡಿಗೆ ಹೊರಟುಹೋದರೆ ಮಂಗ, ಕೋತಿ, ಮರ್ಕಟ ಅಂತಾರೆ. ಊರಲ್ಲಿದ್ದರೂ ಅಂತಾರೆ, ಕಾಡಲ್ಲಿದ್ದರೂ ಅಂತಾರೆ. ಊರಲ್ಲಿದ್ದು ಹೆಂಡತಿ, ಮಕ್ಕಳೊಂದಿಗೆ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದರೆ ಮೋಹ-ವ್ಯಾಮೋಹಗಳ ನೊಗವನ್ನು ಹೆಗಲ ಮೇಲಿಟ್ಟು ‘ಸಂಸಾರಿ’ ಎಂದು ಕರೆದು ಹೀಗಳೆಯುತ್ತಾರೆ.  “ಊರಲ್ಲಿರುವುದು ಬೇಡ; ಸಂಸಾರ ಬೇಡವೇ ಬೇಡ” ಎಂದು ಕಾಡಿಗೆ ಹೋದರೆ ಆ ಕುರಿತು ಕೂಡ ಜನಗಳು ಅನ್ನದೆ ಬಿಡುವುದಿಲ್ಲ. ಕಾಡಿಗೆ ಹೋದರೆ ‘ಪರಾರಿ’ ಮತ್ತು ‘ಪಲಾಯನವಾದಿ’ಯ ಪಟ್ಟ ಕಟ್ಟಿ ಹಿಂಸಿಸುತ್ತಾರೆ. ಅಷ್ಟು ಮಾತ್ರವಲ್ಲ, “ನಿಜಕ್ಕೂ ಆತ ಕಾಡಿನಲ್ಲಿ ಇರಬೇಕಾದವನೇ! ಅಪ್ಪಿತಪ್ಪಿ ಊರೊಳಗೆ ಬಂದಿದ್ದಾನೆ. ಜನಗಳ ಮಧ್ಯದಲ್ಲಿ ಇದ್ದುಕೊಂಡು ಬಾಳುವೆ ಮಾಡುವುದು ಅಂದರೆ ಅದು ಹೇಗೆ ಆತನಿಗೆ ರುಚಿಸೀತು? ಕಾಡಿನಲ್ಲಿದ್ದು ಮಂಗನ ಹಾಗೆ ಕೊಂಬೆಯಿಂದ ಕೊಂಬೆಗೆ ಹಾರಿಕೊಂಡಿರುವುದೇ ಆತನಿಗೆ ಚೆಂದ” ಎಂದು ನಿರರ್ಗಳವಾಗಿ ತಮ್ಮೊಡಲಾಳದ ಕಹಿಯನ್ನೆಲ್ಲ ಹೊರಹಾಕುತ್ತಾರೆ.
ಜನಗಳು ಅಂದುಕೊಳ್ಳುತ್ತಾರೆ, ಆಡಿಕೊಳ್ಳುತ್ತಾರೆ ಎಂದು ಶ್ರೀರಾಮಚಂದ್ರ ತನ್ನ ಪ್ರಿಯಪತ್ನಿ ತುಂಬು ಗರ್ಭಿಣಿ ಸೀತೆಯನ್ನು ಕಾಡಿಗೆ ಕಳುಹಿಸಲಿಲ್ಲವೇ? ಅನ್ನುವುದಕ್ಕೆ, ಆಡುವುದಕ್ಕೆ ನಮ್ಮ ಜನಗಳಿಗೆ ಇಂದ್ರನಾದರೇನು, 
ಚಂದ್ರನಾದರೇನು, ಹರಿಶ್ಚಂದ್ರನಾದರೇನು, ರಾಮಚಂದ್ರನಾದರೇನು?
 ಜನಾಭಿಪ್ರಾಯವಿದು ಅಯೋಧ್ಯೆಯ ಅಗಸನಂತೆ!! ಅದು ರಾಮನನ್ನೂ ಬಿಡುವುದಿಲ್ಲ, ರಹೀಮನನ್ನು ಬಿಡುವುದಿಲ್ಲ!!
ಮಾತನಾಡಿದರೆ ‘ಪಾಪಕರ್ಮಿ’ ಎಂಬರು, ಮಾತನಾಡದಿರ್ದಡೆ ‘ಮುಸುಕಕರ್ಮಿ’ ಎಂಬರು
ಈ ಪ್ರಪಂಚದಲ್ಲಿ ಮಾತನಾಡಿಕೊಂಡಿದ್ದರೂ ಕಷ್ಟ; ಮಾತನಾಡದೆ ಹಾಗೆಯೇ ಸುಮ್ಮನೇ ಬಾಯಿ ಮುಚ್ಚಿಕೊಂಡಿದ್ದರೂ ಕಷ್ಟ. ಜನಗಳು ಮಾತನಾಡಿದರೂ ಅಂತಾರೆ, ಮಾತನಾಡದಿದ್ದರೂ ಅಂತಾರೆ. ಎಲ್ಲರ ಜೊತೆಯಲ್ಲಿ ಬೆರೆತು ‘ಹಾಯ್’, ‘ಬಾಯ್’ ಎಂದು ಮಾತನಾಡಿಕೊಂಡಿದ್ದರೆ, “ಅತಿಯಾಗಿ ಮಾತನಾಡ್ತಾನೆ, ೨೪ ಗಂಟೆ ಕಾಲ, “೨೪ಘಿ೭” ಮಾದರಿಯಲ್ಲಿ ಮಾತಾಡ್ತಾನೇ ಇರ‍್ತಾನೆ. ಪಾಪಿ, ಮಾತಾಡಿ ಮಾತಾಡಿಯೇ ನಮ್ಮನ್ನೆಲ್ಲ ಸಾಯಿಸಿಬಿಡ್ತಾನೆ. ಆ ದೇವರು ಎಲುಬಿಲ್ಲದ ನಾಲಿಗೆ ಕೊಟ್ಟಿದ್ದಾನೆ ಎಂದು ಸರಿಹೋಗಿದೆ. ಆ ದೇವರೇನಾದರೂ ಕಟ್ಟಿಗೆಯ ನಾಲಿಗೆ ಅಥವಾ ಎಲುಬು ಇರುವ ನಾಲಿಗೆ ಕೊಟ್ಟಿದ್ದರೆ ನಾಲಿಗೆಯೆಲ್ಲ ಸವೆದುಹೋಗಿರುತ್ತಿತ್ತು” ಎಂದು ಆಡಿಕೊಳ್ಳುತ್ತಾರೆ. 
ಗಳಿಬಿಳಿಯಾಗಿ ಎಲ್ಲರೊಂದಿಗೂ ಮಾತನಾಡಿಕೊಂಡಿರುವವನಿಗೆ ಪಾಪಿಯ ‘ಪಟ್ಟ’ ಕಟ್ಟುತ್ತಾರೆ. ಇನ್ನು ಯಾರೊಂದಿಗೂ ಮಾತನಾಡದೆ ಸುಮ್ಮನಿದ್ದರೆ ಅದಕ್ಕೂ ಒಂದು ಅಂತಾರೆ. ಮಾತನಾಡದೆ ಇದ್ದರೆ ‘ಮುಸುಕರ್ಮಿ’ ಅಥವಾ ‘ಮುಸುಕಕರ್ಮಿ’ ಎನ್ನುತ್ತಾರೆ. ‘ಮುಸುಕರ್ಮಿ’ ಅಥವಾ ‘ಮುಸುಕಕರ್ಮಿ’ ಎಂದರೆ “ಗುಮ್ಮನಗುಸಕ” ಎಂದರ್ಥ. “ಗುಮ್ಮನಗುಸಕ” ಎಂಬ ಪದವಿದು ಉತ್ತರ ಕರ್ನಾಟಕದಲ್ಲಿ ಹೆಚ್ಚು ಚಾಲ್ತಿಯಲ್ಲಿದೆ. ‘ಗುಮ್ಮನಗುಸಕ’ ಎಂದರೆ “ಹೊರಗ್ಹೋರಗೆ ಏನನ್ನೂ ಮಾಡನಾಡದೆ ಮತ್ತು ಏನನ್ನೂ ತೋರ್ಪಡಿಸಿಕೊಳ್ಳದೆ ಒಳಗೊಳಗೇನೇ ಚೆನ್ನಾಗಿ “ಗಾಳಹಾಕಿಬಿಟ್ಟು” ಕೆಲಸ, ಕಾರ್ಯವನ್ನು ತನ್ನ ಪರವಾಗಿಸಿಕೊಳ್ಳುವವನು” ಎಂದರ್ಥ. ಮಾತನಾಡಿಕೊಂಡಿದ್ದರೆ ಜನಗಳು ವಾಚಾಳಿ, ಬಜಾರಿ, ಮಾತಿನಮಲ್ಲ” ಎನ್ನುತ್ತಾರೆ. “ಮಾತನಾಡುವುದು ಬೇಡ” ಎಂದು ಸುಮ್ಮನಿದ್ದರೆ, “ನೋಡು, ಏನೂ ಮಾತನಾಡದೆ ಅದು ಹೇಗೆ ಗುಮ್ಮನಗುಸುಕನ ಹಾಗೆ ಸುಮ್ಮನಿದ್ದಾನೆ? ಮಾತೇ ಬರುವುದಿಲ್ಲ, ಪಾಪ, ಕೂಸು..!!” ಎಂದು ತಮಾಷೆಮಾಡುತ್ತಾರೆ. 
ಈ ಪ್ರಪಂಚದಲ್ಲಿ ಮಾತನಾಡಿದರೂ ತಪ್ಪು; ಮಾತನಾಡದಿದ್ದರೂ ತಪ್ಪು!! 
ಮಾತನಾಡದಿದ್ದರೆ ಮೌನಗೌರಿ, ಮಾತನಾಡಿದರೆ ಬಡ್ಡಿಬಂಗಾರಮ್ಮ!! 
ಮಲಗದಿರ್ದಡೆ ಚೋರನೆಂಬರು, ಮಲಗಿರ್ದಡೆ ಜಡದೇಹಿ ಎಂಬರು... 
“ಹೇಗಿದ್ದರೂ ಸಹ ಜನಗಳು ಒಂದಲ್ಲ ಒಂದು ಅಂತಾರೆ. ಏನೂ ಬೇಡ. ಯಾರ ಸಹವಾಸಾನೂ ಬೇಡ, ಉಪದ್ರವಾನೂ ಬೇಡ” ಎಂದು ಮನೆಯಲ್ಲಿ ಮುಸುಗಿಕ್ಕಿ ಮಲಗಿಕೊಂಡರೆ ಜನಗಳು ಆಗಲೂ ಸಹ ಬಿಡುವುದಿಲ್ಲ. ಮುಸುಗಿಕ್ಕಿ ಮಲಗಿಕೊಂಡರೆ ಜನಗಳು, ‘ಜಡದೇಹಿ, ಸೋಂಬೇರಿ, ಜಡಭರತ” ಎಂದು ಹಳಿಯುತ್ತಾರೆ. “ಮಲಗಿಕೊಂಡಿದ್ದರೆ ಬಯ್ಯುತ್ತಾರೆ” ಎಂದು ಎಚ್ಚತ್ತುಕೊಂಡಿದ್ದರೆ ಆಗ, “ಕಳ್ಳ, ಚೋರ, ನಿಶಾಚರ” ಎಂದು ಕರೆದು ‘ಚಾರಿತ್ರ್ಯವಧೆ’ ಮಾಡುತ್ತಾರೆ. 
ಎಚ್ಚರಿದ್ದರೆ ‘ಚೋರ್’, ಮಲಗಿಕೊಂಡಿದ್ದರೆ ‘ಕಾಮ್‌ಚೋರ್’!! 
ಏನಿದ್ದರೂ ಜನಕ್ಕೆ ಸಂತೋಷವಿಲ್ಲ, ಸಮಾಧಾನವಿಲ್ಲ. ಹೇಗಿದ್ದರೂ ಸಹ ಜನ ಅಂದುಕೊಳ್ಳುವುದನ್ನು, ಆಡಿಕೊಳ್ಳುವುದನ್ನು  ಬಿಡುವುದಿಲ್ಲ. ಬಹುತೇಕ ಜನಗಳು ಮತ್ತೊಬ್ಬರನ್ನು ಅಂದುಕೊಳ್ಳುವುದರಲ್ಲಿ 
ಮತ್ತು ಆಡಿಕೊಳ್ಳುವುದರಲ್ಲಿಯೇ ತಮ್ಮ ಅತ್ಯಮೂಲ್ಯ ಸಮಯವನ್ನು ಕಳೆದುಹಾಕುತ್ತಾರೆ. ಲೋಕಾಭಿಪ್ರಾಯವನ್ನು ಏಕಮೇವವಾಗಿಸಿಕೊಂಡು ಅದನ್ನು ಆಳಿಕೊಂಡಿರುವುದು ಮತ್ತು ಅದನ್ನು ಏಕೈಕಗೊಳಿಸಿಕೊಂಡಿರುವುದು
 ಆ ಲೋಕೇಶ್ವರನಿಗೂ ಕೂಡ ಸಾಧ್ಯವಿಲ್ಲ. ಏಕೆಂದರೆ “ಪಿಂಡೇ ಪಿಂಡೇ ಮತಿರ್ಭಿನ್ನಃ!! 
ಇಂತೀ ವಸುಧೆಯೊಳಗೆ ಎಂಟು ವಿಧವ ಕಳೆಯಲಳವಲ್ಲ ಕಾಣಾ ಕಲಿದೇವರ ದೇವ!! 
ಈ ಪ್ರಪಂಚದಲ್ಲಿ, ನಮ್ಮೀ ಈ ಧರಣಿ ಮಂಡಲ ಮಧ್ಯದೊಳಗೆ ಜನಗಳು ಸಕಾರಾತ್ಮಕವಾಗಿದ್ದರೂ ಅಂತಾರೆ, ಆಡ್ತಾರೆ; ನಕಾರಾತ್ಮಕವಾಗಿದ್ದರೂ ಅಂತಾರೆ, ಆಡ್ತಾರೆ. ಪ್ರಸ್ತುತ ವಚನದಲ್ಲಿ ಮಡಿವಾಳ ಮಾಚಿದೇವರು ‘ಸಕಾರಾತ್ಮಕ’ ಮತ್ತು ‘ನಕಾರಾತ್ಮಕ’ ನಾಲ್ಕ್ನಾಲ್ಕು ಅಂಶಗಳನ್ನು ಪ್ರಸ್ತಾಪಿಸಿಬಿಟ್ಟು ಈ ಎಂಟು ಪ್ರಕಾರಗಳಲ್ಲಿ ಹೇಗಿದ್ದರೂ ಜನ ಅಂತಾರೆ, ಆಡಿಕೊಳ್ತಾರೆ. ಜನರು ಅನ್ನೋದನ್ನು, ಆಡೋದನ್ನು ತಪ್ಪಿಸಲು ಸಾಧ್ಯವಿಲ್ಲ. ಜನರನ್ನು ಮೆಚ್ಚಿಸುವುದಂತೂ ಯಾರಿಂದಲೂ  ಸಾಧ್ಯವಿಲ್ಲ” ಎಂಬ ತೀರ್ಪು ನೀಡಿದ್ದಾರೆ. 
ಮಾಚಿದೇವರು ಇಲ್ಲಿ ಬರೀ ಎಂಟು ಅಂಶಗಳ ‘ಪ್ರಸ್ತಾಪ’ ಮತ್ತು ‘ಪಟ್ಟಿ’ ಮಾತ್ರ ಮಾಡಿದ್ದಾರೆ. 
ಭೂಮಂಡಲದಲ್ಲಿ ಇಂಥ ನೂರಾರು, ಸಾವಿರಾರು ಅಂಶಗಳಿವೆ. 
ಜನಗಳು ಎಲ್ಲವನ್ನೂ ಒಪ್ಪಿ ‘ಸೈ’ ಎನ್ನುವಂಥ ಮತ್ತು ‘ಜೈ’ ಎನ್ನುವಂಥ ಮಾತಾಗಲಿ, ವ್ಯಕ್ತಿಯಾಗಲಿ, ವ್ಯಕ್ತಿತ್ವವಾಗಲಿ 
ಈ ಪ್ರಪಂಚದಲ್ಲಿ ಇಲ್ಲವೇ ಇಲ್ಲ. ಅದಕ್ಕೋಸ್ಕರ ನಿಜವಾದ ಬುದ್ಧಿವಂತ ಮನುಷ್ಯ ಜನಮೆಚ್ಚುಗೆಯ ಹಿಂದೆ ಬೀಳದೆ ಮನ ಮೆಚ್ಚುವಂತೆ ನಡೆದುಕೊಂಡಿದ್ದರೆ ಸಾಕು. “ಜನಮೆಚ್ಚುಗೆಗಿಂತ ಮನಮೆಚ್ಚುಗೆ ತುಂಬ ಮುಖ್ಯ”. 
ಜನ ಮೆಚ್ಚದೆ ಇದ್ದರೂ ಮನ ಮೆಚ್ಚುವಂತೆ ನಡೆದುಕೊಂಡರೆ ಸಾಕು. ಮನ ಮೆಚ್ಚುವಂತೆ ನಡೆದುಕೊಂಡರೆ 
ಆ ದೇವರು, ಪರಾತ್ಪರ ಆ ಬ್ರಹ್ಮ ಕೂಡ ಮೆಚ್ಚಿಕೊಂಡು ‘ಭಲೇ, ಭೇಷ್’ ಹೇಳುತ್ತಾನೆ.
೧೨ನೇ ಶತಮಾನದ ಇನ್ನೋರ್ವ ಖ್ಯಾತ ವಚನಕಾರರಾದ ಅಂಬಿಗರ ಚೌಡಯ್ಯನವರ ವಚನವೊಂದು 
ಮಡಿವಾಳ ಮಾಚಿದೇವರ ಈ ವಚನದ ಹಾಗೇನೇ ಮತ್ತು ಅದೇ ಧಾಟಿಯಲ್ಲಿಯೇ ಇದೆ. 
ಹಾಗೇ ಸುಮ್ಮನೇ ಅದನ್ನು ಜಿಜ್ಞಾಸು-ವಾಚಕರ ಗಮನಕ್ಕೆ ತರುತ್ತಲಿದ್ದೇವೆ. 
ಅಂಬಿಗರ ಚೌಡಯ್ಯನವರ ವಚನ
ಉಂಡರೆ ಭೂತನೆಂಬರು, ಭೋಗಿಸದಿದ್ದರೆ ಮುನ್ನ ಮಾಡಿದ ಕರ್ಮಿ ಎಂಬರು.
ಊರೊಳಗಿದ್ದರೆ ಸಂಸಾರಿ ಎಂಬರು, ಅಡವಿಯೊಳಗಿದ್ದರೆ ಮೃಗಜಾತಿ ಎಂಬರು.
ನಿದ್ರೆಗೈದರೆ ಜಡದೇಹಿ ಎಂಬರು, ಎದ್ದಿದ್ದರೆ ಚೋರನೆಂಬರು (ಜಾರ)
ಇಂತೀ ಜನಮೆಚ್ಚಿ ನಡೆದವರ 
ಎಡದ ಪಾದ ಕಿರುಗುಣಿಯಲ್ಲಿ ಮನೆಮಾಡು, ಮನೆಮಾಡು
ಎಂದಾತ ನಮ್ಮ ಅಂಬಿಗರ ಚೌಡಯ್ಯ.

ಡಾ. ಶ್ರೀ ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು 

1 comment: