ತಾಯಂದಿರು ಮದಾಲಸಾಳ ಹಾಗೆ
ಮೊದಲ ಪಾಠಶಾಲೆಯಾಗಬೇಕು
ಡಾ. ಶಿವಾನಂದ ಶಿವಾಚಾರ್ಯರು
ತುಮಕೂರು ೦೮ : “ಮದಾಲಸಾ ಹುಟ್ಟುವಿದುಷಿ ಮತ್ತು ಬ್ರಹ್ಮಜ್ಞಾನಿ. ಮದಾಲಸಾ ಋತುಧ್ವಜನನ್ನು ಮದುವೆಯಾಗುತ್ತಾಳೆ. ತನ್ನ ಮಕ್ಕಳಿಗೆ ಶಿಕ್ಷಣ ಕೊಡಿಸುವ ಜವಾಬ್ದಾರಿ ತನ್ನದು ಮಾತ್ರ. ಮಕ್ಕಳ ಪಾಠ-ಪ್ರವಚನಗಳ ವಿಷಯದಲ್ಲಿ ಋತುಧ್ವಜ ಮೂಗು ತೂರಿಸಬಾರದು” ಎಂದು ಅವಳು ಋತುಧ್ವಜನಿಂದ ಭಾಷೆ ತೆಗೆದುಕೊಳ್ಳುತ್ತಾಳೆ. ಮೊದಲ ಮಗು ಹುಟ್ಟುತ್ತಲೇ ಮದಾಲಸಾ ಸ್ವತಃ ತಾನೇ ಬೋಧಕಿಯಾಗಿ ಮಗುವಿಗೆ ಶಿಕ್ಷಣವನ್ನು ಕೊಡಲು ಪ್ರಾರಂಭಿಸುತ್ತಾಳೆ. ಮಗನನ್ನು ಆಕೆ ಬ್ರಹ್ಮಜ್ಞಾನಿಯನ್ನಾಗಿಸುತ್ತಾಳೆ. ಎರಡನೆಯ ಮಗ, ಮೂರನೆಯ ಮಗನನ್ನು ಕೂಡ ಆಕೆ ಬ್ರಹ್ಮಜ್ಞಾನಿಯನ್ನಾಗಿಸುತ್ತಾಳೆ.
ನಾಲ್ಕನೆಯ ಮಗು ಹುಟ್ಟುತ್ತದೆ. ಮಗು ಹುಟ್ಟುತ್ತಲೇ ಮದಾಲಸಾ “ಶುದ್ಧೋSಸಿ, ಬುದ್ಧೋSಸಿ” ಎಂದು ಶುರುಹಚ್ಚಿಕೊಳ್ಳುತ್ತಾಳೆ. ಋತುಧ್ವಜ ಸಹನೆ ಕಳೆದುಕೊಳ್ಳುತ್ತಾನೆ, ಅಡ್ಡಿಪಡಿಸುತ್ತಾನೆ. ಮದಾಲಸಾ ಋತುಧ್ವಜನಿಗೆ, “ನಾನು ಮೂರು ಮಕ್ಕಳನ್ನು ಬ್ರಹ್ಮಜ್ಞಾನಿಗಳನ್ನಾಗಿ ರೂಪಿಸಿದೆ. ನಾಲ್ಕನೆಯ ಮಗನ ಭವಿಷ್ಯವನ್ನು ರೂಪಿಸುವುದಕ್ಕೆ ಮೊದಲೇ ನೀನು ಅಡ್ಡಬಂದೆ” ಎಂದು ಹೇಳಿ ಹೊರಟುಹೋಗುತ್ತಾಳೆ.
ಮದಾಲಸಾಳ ಹಾಗೆ ಎಲ್ಲ ತಾಯಂದಿರು ಮಕ್ಕಳು ಹುಟ್ಟುತ್ತಲೇ ಅವರಿಗೆ ಉತ್ತಮ ರೀತಿ, ನೀತಿ, ಸಂಸ್ಕಾರ, ಸದಾಚಾರಗಳನ್ನು ಕಲಿಸಿಕೊಟ್ಟರೆ ಮಕ್ಕಳು ಜ್ಞಾನಿಗಳಾಗುತ್ತಾರೆ. ಇವತ್ತಿನ ತಾಯಂದಿರು ಮದಾಲಸಾಗಳ ಹಾಗೆ ತಮ್ಮ ಮಕ್ಕಳನ್ನು ಬ್ರಹ್ಮಜ್ಞಾನಿಗಳನ್ನಾಗಿ ಮಾಡದಿದ್ದರೂ ಪರವಾ ಇಲ್ಲ; ಆದರೆ ಅವರು ತಮ್ಮ ಮಕ್ಕಳನ್ನು ದೇಶಭಕ್ತರನ್ನಾಗಿ, ಉತ್ತಮ ನಾಗರಿಕರನ್ನಾಗಿ ರೂಪಿಸುವ ನಿಟ್ಟಿನಲ್ಲಿ ಶ್ರಮಿಸಬೇಕಾದ ಅಗತ್ಯವಿದೆ. ಈ ದೇಶದ ಪ್ರತಿಯೊಬ್ಬ ತಾಯಿ ಮದಾಲಸಾಳಂತೆ ತಾಯಿಯೇ ಮೊದಲ ಪಾಠಶಾಲೆ ಎಂಬ ಮಾತನ್ನು ನಿರೂಪಿಸಬೇಕಿದೆ” ಎಂದು ತುಮಕೂರು ಹಿರೇಮಠಾಧ್ಯಕ್ಷರಾದ
ಡಾ. ಶಿವಾನಂದ ಶಿವಾಚಾರ್ಯರು ತುಮಕೂರು-ಯಲ್ಲಾಪುರದ ಶ್ರೀ ವನಿತಾ ವಿದ್ಯಾಕೇಂದ್ರದ ೨೦೧೬-೨೦೧೭ನೇ
ಸಾಲಿನ ಶಾಲಾ ವಾರ್ಷಿಕೋತ್ಸವದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಪಾಲಕ, ಪೋಷಕರನ್ನುದ್ದೇಶಿಸಿ ಈ ಮೇಲಿನ ಮಾತುಗಳನ್ನು ಹೇಳಿದರು.
ಅವರು ಮತ್ತೆ ಮುಂದುವರಿದು, “ನಿಮ್ಮ ಮಕ್ಕಳು ಮಕ್ಕಳಾಗಿ ಬೆಳೆಯಲಿ. ಅವರು ಹಿಂದೂಗಳಾಗಿ ಬೆಳೆಯುವುದು ಬೇಡ. ಅವರು ಮುಸ್ಲೀಂರಾಗಿ ಬೆಳೆಯುವುದು ಬೇಡ. ಅವರು ಕ್ರಿಶ್ಚಿಯನ್ನರಾಗಿ ಬೆಳೆಯುವುದು ಬೇಡ. ಮತ್ತೆ ಆ, ಈ ಜಾತಿ, ಧರ್ಮಗಳ ಹಣೆಪಟ್ಟಿಯನ್ನು ಕಟ್ಟಿಕೊಂಡು ಬೆಳೆಯುವುದು ಬೇಡ. ಮಕ್ಕಳು ಮಕ್ಕಳಾಗಿ ಬೆಳೆಯುವುದಕ್ಕೆ ಅವಕಾಶಕೊಡಿ. ಮಕ್ಕಳ ತಲೆಯಲ್ಲಿ ಜಾತಿಕಸ, ಜಾತಿವಿಷ ತುಂಬಬೇಡಿ. ನಿಮ್ಮ ಮಕ್ಕಳು ವಿಶ್ವಮಾನವರಾಗಿ ಬೆಳೆಯಬೇಕು. ಅವರು ಜಾತಿ, ಮತ, ಪಂಥ, ಪಂಗಡಗಳ ವಿಷವರ್ತುಲದ ಸುಳಿಗೆ ಸಿಲುಕುವುದು ಬೇಡ” ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀ ಸಿ. ಹೆಚ್. ಮರಿದೇವರು ಮಕ್ಕಳಿಗೆ ಭಾಷಾ ಸಂಸ್ಕೃತಿಯ ಪರಿಚಯ ಮಾಡಿಕೊಟ್ಟರು.
ಇದೇ ಸಂದರ್ಭದಲ್ಲಿ ಖ್ಯಾತ ಕವಿಗಳೂ ಮತ್ತು ಸಾಹಿತಿಗಳೂ ಆದ ಶ್ರೀ ಕವಿತಾ ಕೃಷ್ಣರವರನ್ನು ಹಾಗೂ ಹೆಬ್ಬೂರಿನ ಹಿರಿಯ ಸಾಂಸ್ಕೃತಿಕ ಚೇತನ ಶ್ರೀ ಪಾಂಡುರಂಗ ಶೆಟ್ಟಿಯವರನ್ನು ವಿದ್ಯಾಕೇಂದ್ರದ ಅಧ್ಯಕ್ಷರಾದ
ಶ್ರೀ ವಿ. ರಾಮಕೃಷ್ಣಯ್ಯನವರು ಮತ್ತು ಶಾಲಾ ಅಧ್ಯಾಪಕರುಗಳು ಸನ್ಮಾನಿಸಿ ಅಭಿನಂದಿಸಿದರು.
ಶ್ರೀ ವಿ. ರಾಮಕೃಷ್ಣಯ್ಯನವರು ಸ್ವಾಗತ ಭಾಷಣ ಮಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶ್ರೀಮತಿ ವಸುಂಧರಾ ಪ್ರಾರ್ಥನಾ ಗೀತೆಯನ್ನು ಹೇಳಿದರು. ಶ್ರೀ ಕೆ. ಟಿ. ಮೂಡ್ಲಗಿರಿಯಪ್ಪನವರು ವಂದನಾರ್ಪಣೆ ಮಾಡಿದರು.
